ಅಂಕೋಲಾ: ಶಿಕ್ಷಕ ದಿನಾಚರಣೆಯಂದು ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತರಾದವರೊಬ್ಬರನ್ನು ಹುಡುಕಿ ಸನ್ಮಾನಿಸುವ ಕಾರ್ಯವನ್ನು ದಿನಕರ ವೇದಿಕೆ ಕಳೆದ ವರ್ಷದಿಂದ ಪ್ರಾರಂಭಿಸಿದೆ.
ಈ ವರ್ಷ ನೂತನ ಸಭಾ ಟ್ರಸ್ಟ್ ನಲ್ಲಿ ಸೇವೆ ಸಲ್ಲಿಸಿದ, ದಿ. ಗಿರಿ ಪಿಕಳೆ ಮತ್ತು ಪ್ರೇಮಾ ಪಿಕಳೆ ದಂಪತಿಗಳಿಗೆ ಮೆಚ್ಚಿನ ಶಿಕ್ಷಕರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀ ಸದಾನಂದ ನಾಗ್ವೇಕರ ದಂಪತಿಗಳಿಗೆ ಮಠಾಕೇರಿಯ ಸನ್ಮಾನಿತರ ಸ್ವಗೃಹದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಅಭಿನಂದನಾಪರ ಮಾತನಾಡಿದ ದುರ್ಗಾನಂದ ದೇಸಾಯಿ, ಎಂ ಎಂ ಕರ್ಕಿಕರ , ವಸಂತ ಕೆ. ನಾಯ್ಕ ಮತ್ತು ಕಮಲಾಕರ ಬೋರಕರರವರು ಸನ್ಮಾನಿತರ ಬಹುಮುಖ ವ್ಯಕ್ತಿತ್ವ ಮತ್ತು ಅವರೊಡನೆ ತಮ್ಮ ಒಡನಾಟದ ಬಗ್ಗೆ ಸಭಿಕರೊಂದಿಗೆ ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿದ ಶ್ರೀ ಸದಾನಂದ ನಾಗ್ವೇಕರವರು ಮಾತನಾಡುತ್ತಾ ದಿ. ದಿನಕರ ದೇಸಾಯಿ ಮತ್ತು ದಿ. ಗಿರಿ ಪಿಕಳೆ ಅಂಕೋಲಾ ಮತ್ತು ಉತ್ತರ ಕನ್ನಡ ಜಿಲ್ಲೆಯ ಎರಡು ಕಣ್ಣುಗಳಿದ್ದಂತೆ ಎಂದು ತಿಳಿಸಿದರಲ್ಲದೆ ಕೆಲವು ಹಿತಶತ್ರುಗಳಿಂದಾಗಿ ಇಬ್ಬರು ಬೇರೆಯಾದರೂ ಶಿಕ್ಷಣ ಕ್ಷೇತ್ರಕ್ಕೆ ಇಬ್ಬರ ಕೊಡುಗೆ ಅಪಾರ ಎಂದರು. ದಿನಕರ ದೇಸಾಯಿಯವರ ಅನೇಕ ಚುಟುಕು ಮತ್ತು ಭಾವಗೀತೆಗಳನ್ನು ಉಲ್ಲೇಖಿಸಿ ಅವರ ಆದರ್ಶ ಕಲ್ಪನೆಯನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷರಾದ ರವೀಂದ್ರ ಕೇಣಿ ಮಾತನಾಡುತ್ತಾ, ಸನ್ಮಾನಿತರು ತಮ್ಮ ಸೇವಾಧಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಬಹುಮುಖ ಪ್ರತಿಭೆ ಇವರಲ್ಲಿದ್ದು ಇಂತಹವರನ್ನು ಸನ್ಮಾನಿಸಿದ್ದು ನಮ್ಮ ದಿನಕರ ವೇದಿಕೆಯ ಹೆಮ್ಮೆ ಎಂದರು.
ಸನ್ಮಾನ ಕಾರ್ಯಕ್ರಮದಲ್ಲಿ ಜಿ ಸಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಅಶೋಕಕುಮಾರ ಎ., ವೇದಿಕೆಯ ಪದಾಧಿಕಾರಿಗಳಾದ ಅಬ್ದುಲ್ ಲತೀಫ್ ಶೇಖ್,ವಸಂತ ಕೆ. ನಾಯ್ಕ, ಶ್ರೀಮತಿ ಶೀಲಾ ಬಂಟ, ಗಣಪತಿ ಟಿ. ನಾಯಕ, ಖೇಮು ಎಂ. ನಾಯ್ಕ, ರಫೀಕ್ ಶೇಖ್, ಸಂಜೀವರಾವ, ಶ್ರೀಮತಿ ಮಂಜುಳಾ ಬಂಟ, ಸಾಹಿತಿ ಸಾತು ಗೌಡ ಮತ್ತು ಸನ್ಮಾನಿತರ ಕುಟುಂಬದವರು ನೆರೆಹೊರೆಯ ಹಿತೈಷಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿದರು.
ವೇದಿಕೆಯ ಕಾರ್ಯದರ್ಶಿ ಸಂದೇಶ ಉಳ್ಳಿಕಾಶಿ ಸ್ವಾಗತಿಸಿದರು. ಕೋಶಾಧ್ಯಕ್ಷರಾದ ಸಂತೋಷ ನಾಯಕ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಕೊನೆಯಲ್ಲಿ ವೇದಿಕೆಯ ಉಪಾಧ್ಯಕ್ಷ ನೇಮಸಿಂಗ ರಾಠೋಡ ವಂದಿಸಿದರು.