ಅಂಕೋಲಾ: ಅಂಕೋಲಾ ತಾಲೂಕಿನಲ್ಲಿ ಸರಣಿ ಕಳ್ಳತನ ಸದ್ದು ಮಾಡಿತ್ತು. ಸರಣಿಯಲ್ಲಿ ದ್ವಿಚಕ್ರ ವಾಹನ ಕದ್ದು ಕಳ್ಳರು ಕರಾಮತ್ತು ತೋರಿದರು. ವಿಶೇಷ ಕಾರ್ಯಾಚರಣೆ ಮಾಡಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಗ್ರಾಮೀಣ ಪ್ರದೇಶದ ಕೆಲವೆಡೆ ಮನೆಗಳನ್ನು ದೋಚಿ ಕಳ್ಳರು ಕೈಚಳಕ ತೋರಿದ್ದರು. ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದ ಕಳ್ಳನ ಕೈಗೆ ಕೋಳ ತೊಡಿಸಿದ ಅಂಕೋಲಾ ಪೋಲೀಸರು 15ಕ್ಕೂ ಹೆಚ್ಚಿನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಮೂಲಕ ಕ್ಷೀಪ್ರ ಕಾರ್ಯಚರಣೆ ಮಾಡಿದ ಪೊಲೀಸರ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಇದೀಗ ಮತ್ತೊಮ್ಮೆ ತಾಲೂಕಿನಲ್ಲಿ ಮಂಗಳಸೂತ್ರ ದೋಚಿಕೊಂಡು ಹೋಗಿರುವ ಪ್ರಕರಣವೊಂದು ಜರುಗಿದೆ.
ಸೋಮವಾರ ತಾಲೂಕಿನ ಗ್ರಾಮೀಣ ಪ್ರದೇಶ ಹಟ್ಟಿಕೇರಿಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಓರ್ವರ ಕುತ್ತಿಗೆಯಲ್ಲಿದ್ದ ಮಂಗಳಸೂತ್ರವನ್ನ ಬೈಕ್ ನಲ್ಲಿ ಬಂದ ಇಬ್ಬರೂ ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಅಂಕೋಲಾ ತಾಲೂಕಿನ ಸೀಬರ್ಡ ಕಾಲೋನಿಯ ನಿವಾಸಿಯಾಗಿರುವ ವಾಸಂತಿ ಚುಡಾಮಣಿ ತಾಂಡೇಲ್ ಅಂಕೋಲಾದ ಬೇಲೆಕೇರಿಯ ರಸ್ತೆ ಮೂಲಕ ಹಟ್ಟಿಕೇರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ ಮಹಿಳೆಯ ಹಿಂಬದಿಯಿಂದ ಬೈಕ್ ಮೇಲೆ ಬಂದ ಕಳ್ಳರು ಆಕೆಯ ಕುತ್ತಿಗೆಯಲ್ಲಿದ್ದ 20 ಗ್ರಾಂ ತೂಕದ ಎರಡು ಎಳೆಯ ಮಂಗಳಸೂತ್ರವನ್ನ ಹರಿದುಕೊಂಡು ವೇಗವಾಗಿ ಬೈಕ್ ಚಲಿಸಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನವಾಗಿರುವ ಬಂಗಾರದ ಮೌಲ್ಯ ₹80000 ಸಾವಿರ ಎಂದು ಅಂದಾಜಿಸಲಾಗಿದೆ.
ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಸುದ್ದಿಯಾಗುತ್ತಲೇ ಇದ್ದರೂ ಕಳ್ಳರ ಸದ್ದಡಗಿಸುವ ಪ್ರಯತ್ನವನ್ನು ಪೊಲೀಸರು ನಿರಂತರವಾಗಿ ಮಾಡುತ್ತಿದ್ದಾರೆ.