ಭಟ್ಕಳ: ಶ್ರೀ ನಾರಾಯಣ ಗುರು ಜಯಂತ್ಯೊತ್ಸವ- 2023 ಬೃಹತ್ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮವು ಸೆಪ್ಟೆಂಬರ್ 10 ರಿಂದ ರವಿವಾರ ಬೆಳಗ್ಗೆ 09.30 ಗಂಟೆಗೆ ಶ್ರೀ ನಿಚ್ಛಲಮಕ್ಕಿ ವೆಂಕಟರಮಣ ದೇವಸ್ಥಾನ ಗುರುಮಠದ ಆಡಳಿತ ಮಂಡಳಿ, ಶ್ರೀ ಹಳೇಕೋಟೆ ಹನುಮಂತ ದೇವಸ್ಥಾನ ಸಾರದಹೊಳೆ ಆಡಳಿತ ಮಂಡಳಿ ಮತ್ತು ನಾಮಧಾರಿ ಸಮಾಜ ಬಾಂಧವರ ಸಂಯುಕ್ತ ಆಶ್ರಯದಲ್ಲಿ ಶ್ರೀ ನಾರಾಯಣ ಗುರುಗಳ ಜಯಂತಿಯ ಪ್ರಯುಕ್ತ ಬೃಹತ್ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಕ್ರಷ್ಣ ನಾಯ್ಕ ಆಸರಕೇರಿ ತಿಳಿಸಿದರು. ಅವರು ಮಂಗಳವಾರದಂದು ಇಲ್ಲಿನ ನಿಚ್ಛಲಮಕ್ಕಿ ವೆಂಕಟರಮಣ ಸಭಾಭವನ ಆಸರಕೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
‘ಕರ್ನಾಟಕದಲ್ಲಿ ನಾಮಧಾರಿ, ಪೂಜಾರಿ, ಬಿಲ್ಲವ, ಈಡಿಗ, ಹಳೆಪೈಕ ಮುಂತಾದ ಹೆಸರಿಂದ ಕರೆಯಲ್ಪಡುವ ಜನಾಂಗವನ್ನು ಕೇರಳದಲ್ಲಿ ಈಳವ ಅಥವಾ ಎಜವಾ ಹೆಸರಿಂದ ಗುರುತಿಸಲಾಗುತ್ತದೆ. ಕೇರಳದ ಚತುವರ್ಣ ವ್ಯವಸ್ಥೆಯಲ್ಲಿ ಈಳವರನ್ನು ಅಸ್ಪ್ರಶ್ಯ ವರ್ಗದಲ್ಲಿ ಪರಿಗಣಿಸಲಾಗಿತ್ತು. ಇಂತಹ ಈಳವಾ ಸಮುದಾಯದಲ್ಲಿ ಪಾರಂಪರಿಕ ವೈದ್ಯರಾಗಿದ್ದ ಮಾದನ್ ಆಶನ್ ಮತ್ತು ಕುಟ್ಟಿ ಅಮ್ಮಾಳ್ ದಂಪತಿಗಳಿಗೆ ಜನಿಸಿದ ಮಗು ನಾರಾಯಣ. ಪ್ರೀತಿಯಿಂದ ಮಗುವನ್ನು ನಾಣು ಎಂದು ಕರೆಯುತ್ತಿದ್ದರು. ಈ ಹಿಂದಿನ ಸಾಮಾಜಿಕ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿದ ನಾರಾಯಣ ಗುರುಗಳು ಸಮಸ್ಯೆ ಬೇರು ವರ್ಣಾಶ್ರಮದಲ್ಲಿರುವುದನ್ನು ಗುರುತಿಸಿ ಧಾರ್ಮಿಕ ಸುಧಾರಣೆಯ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು.1888ರಲ್ಲಿ ನಾರಾಯಣ ಗುರುಗಳು ಅರವಿಪುರಂನಲ್ಲಿ ಶಿವದೇವಾಲಯ ಸ್ಥಾಪಿಸಿದಾಗ ಕೇರಳದ ಹಿಂದು ಸಮಾಜದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. “ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು” ಎಂಬ ಸಮಾನತಾ ಸಿದ್ದಾಂತದ ಮೂಲಕ ಸಂಪೂರ್ಣ ಮಾನವ ಜನಾಂಗವನ್ನು ಒಂದುಗೂಡಿಸಿದರು. “ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ” ಎಂದು ಸಮಾಜದ ದುರ್ಬಲರಿಗೆ ಮಾರ್ಗದರ್ಶನ ಮಾಡುವ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣಿಕರ್ತರಾದರು ಎಂದರು.
‘ನಾರಾಯಣ ಗುರುಗಳ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಕಾರಣ ಹಿಂದುಳಿದ ವರ್ಗಗಳ ಸಮಾಜಕ್ಕೆ ಮಾದರಿಯಾಗಿದೆ. ನಾರಾಯಣ ಗುರುಗಳ ಬಗ್ಗೆ ನಮ್ಮ ಇಂದಿನ ಹಾಗೂ ಮುಂದಿನ ಪೀಳಿಗೆಯ ಜನರಿಗೆ ಸಂದೇಶ ತಿಳಿಯಬೇಕಾಗಿದೆ. ಈ ಹಿನ್ನೆಲೆ ಕಳೆದ ಬಾರಿ ಅದ್ದೂರಿ ಕಾರ್ಯಕ್ರಮ ಆಗದ ಕಾರಣ ಈ ಬಾರಿ ಮುಂದಾಗಿದ್ಧೇವೆ. ಕಳೆದ ಸರಕಾರದ ಅವಧಿಯಲ್ಲಿ ಸ್ಥಾಪನೆಯಾದ ನಾರಾಯಣ ಗುರು ನಿಗಮಕ್ಕೆ ಆರ್ಥಿಕ ಸಹಾಯ ನೀಡಿಲ್ಲ ಈ ಬಾರಿಯ ಸರಕಾರವು ಸಹ ನಿಗಮಕ್ಕೆ ಆರ್ಥಿಕ ಸಹಕಾರ ನೀಡಿಲ್ಲ. ಈ ನಿಟ್ಟಿನಲ್ಲಿ ನಿಗಮಕ್ಕೆ ಆರ್ಥಿಕ ಸಹಾಯ ಮಾಡಲೇಬೇಕು ಎಂದು ಹಕ್ಕೋತ್ತಾಯ ಮಾಡುವ ಉದ್ದೇಶದಿಂದ ಕಾರ್ಯಕ್ರಮದ ರೂಪುರೇಷೆ ಮಾಡಿಕೊಂಡಿದ್ದೇವೆ. ಈ ಹಿನ್ನೆಲೆ ಸಮಾಜದ ಹತ್ತು ಸಾವಿರಕ್ಕೂ ಅಧಿಕ ಜನರೊಂದಿಗೆ ಮೆರವಣಿಗೆ ಮಾಡಲಿದ್ದೇವೆ ಎಂದರು.
ಮೆರವಣಿಗೆಯು ಬೆಳಿಗ್ಗೆ 09.30 ಗಂಟೆಗೆ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಗುರುಮಠ ಆಸರಕೇರಿಯಿಂದ ಸೋನಾರಕೇರಿ ಶಾಸಕರ ಮಾದರಿ ಶಾಲೆ ಮಾರ್ಗವಾಗಿ ಅಲ್ಲಿಂದ ಮೈಸುರು ಕೆಪೆ ರಸ್ತೆಯಿಂದ ಸಂಶುದ್ದೀನ್ ಸರ್ಕಲನಿಂದ ಪೊಲೀಸ್ ಸ್ಟೇಷನ್ ರಸ್ತೆ ಮೂಲಕ
ವೆಂಕಟರಮಣ ದೇವಸ್ಥಾನ ಆಸರಕೇರಿಗೆ ತನಕ ಬ್ರಹತ ಮೆರವಣಿಗೆ ನಡೆಯಲಿದೆ. ಇದರಲ್ಲಿ
ಸಮಾಜದ ಎಲ್ಲಾ ಸ್ಥರದ ನೌಕರರು, ಮಹಿಳೆಯರು, ಕೂಲಿ ಕಾರ್ಮಿಕ, ಅಂಗಡಿಕಾರರು, ಆಟೋ ರಿಕ್ಷಾ ಚಾಲಕರು ಪಾಲ್ಗೊಂಡು ಹಕ್ಕೋತ್ತಾಯ ಮಾಡಬೇಕಾಗಿದೆ.
ಮಧ್ಯಾಹ್ನ 12-00 ಗಂಟೆಗೆ ಧರ್ಮಸ್ಥಳ ಉಜಿರೆಯ ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪನ್ಯಾಸಕಾರಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿ ಮಂಗಳೂರಿನ ಕೋಶಾಧಿಕಾರಿ ಶ್ರೀ ಪದ್ಮರಾಜ್ ಆರ್. ನಡೆಸಿಕೊಡಲಿದ್ದಾರೆ. ಉಳಿದಂತೆ ನಾಮಧಾರಿ ಸಮಾಜದ ಅಧ್ಯಕ್ಷ ಕ್ರಷ್ಣ ನಾಯ್ಕ ಹಾಗೂ ನಾಮಧಾರಿ ಸಮಾಜದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಮಾಜ ಬಾಂಧವರು ಕಡ್ಡಾಯವಾಗಿ ತಮ್ಮ ಅಂಗಡಿ ವ್ಯವಹಾರಗಳನ್ನು ಮುಚ್ಚಿ ಭಟ್ಕಳ ಮತ್ತು ಸಾರದಹೊಳೆ ನಾಮಧಾರಿ ಕೂಟಗಳಿಂದ ಸೂಚನೆ ನೀಡಲಾಗಿದೆ ಎಂದರು. ಈ ಸಂಧರ್ಭದಲ್ಲಿ ನಾಮಧಾರಿ ಸಮಾಜದ ಉಪಾಧ್ಯಕ್ಷ ಭವಾನಿ ಶಂಕರ ನಾಯ್ಕ, ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ಜೆ. ನಾಯ್ಕ,
ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಾಯ ಮಂಜು ನಾಯ್ಕ, ಜೆ.ಡಿ.ನಾಯ್ಕ, ರಾಘವೇಂದ್ರ ನಾಯ್ಕ, ಮನಮೋಹನ ನಾಯ್ಕ, ಗಿರೀಶ ನಾಯ್ಕ ಮುಂತಾದವರು ಇದ್ದರು.