ಸಿದ್ದಾಪುರ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಶಿಕ್ಷಕರ ದಿನಾಚರಣೆ

ಸಿದ್ದಾಪುರ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಪಟ್ಟಣದ ಶಂಕರಮಠದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಗುರು ಸನ್ಮಾನ ಕಾರ್ಯಕ್ರಮ ನೆರವೇರಿಸಿ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿ ಸಮಾಜದ ಸುಸಂಸ್ಕೃತ ನಾಗರಿಕರನ್ನು ರೂಪಿಸುತ್ತಿರುವ ಶಿಕ್ಷಕರಿಗೆ ಸರಿಯಾದ ಗೌರವ ಸಿಗಬೇಕು, ಶಿಕ್ಷಣದ ಮೂಲಕ ಮಾತ್ರ ದೇಶ ಹಾಗೂ ಸಮಾಜದ ಪ್ರಗತಿ ಕಾಣಲು ಸಾಧ್ಯ. ಯಾವ ಮಗುವು ಕೂಡ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಪ್ರತಿ ಮಗು ಕೂಡ ಶಿಕ್ಷಣ ಪಡೆಯಬೇಕು. ರಾಧಾಕೃಷ್ಣನ್ ಅವರ ಆಶಯಗಳನ್ನು ಇಡೇರಿಸುವುದು ನಮ್ನೆಲ್ಲರ ಕರ್ತವ್ಯವಾಗಿದೆ ಎಂದ ಅವರು ಶಿಕ್ಷಕರು ಸಲ್ಲಿಸುತ್ತಿರುವ ಸೇವೆಗೆ ಸರಿಯಾದ ಗೌರವ ಸಿಗಬೇಕು. ಭಾರತ ಸಂಪದ್ಭರಿತ ರಾಷ್ಟ್ರವಾಗಲು ಎಲ್ಲರೂ ಶಿಕ್ಷಣ ಪಡೆಯಬೇಕು. ದೇಶದ ಶಿಲ್ಪಿಗಳನ್ನು ರೂಪಿಸುತ್ತಿರುವ ಶಿಕ್ಷಕರಿಗೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಅನೇಕ ಸಮಸ್ಯೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ಈಗಾಗಲೇ ತರಲಾಗಿದೆ. ಸಿದ್ದಾಪುರದಲ್ಲಿ ಗುರುಭವನಕ್ಕೆ ನಿರ್ಮಾಣಕ್ಕೆ ಸಂಬಂಧಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಸ್ಥಳ ಗುರುತಿಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಕರ ಕಾನೂನಾತ್ಮಕ ಬೇಡಿಕೆಗಳಿಗೆ ನಿಮ್ಮ ಪ್ರತಿನಿಧಿಯಾಗಿ ನಾನು ಕೂಡ ಧ್ವನಿಗೂಡಿಸುತ್ತೇನೆ. ನಿಮ್ಮ ಯಾವುದೇ ಸಮಸ್ಯೆ ಇದ್ದರು ಕೂಡ ಅದು ಮಕ್ಕಳ ಶಿಕ್ಷಣದ ಮೇಲೆ‌ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಪ್ರಾಸ್ತಾವಿಕ ಮಾತನಾಡಿ ಬೇಡಿಕೆಗಳ ಪಟ್ಟಿ ವಿವರಿಸಿ ಶಾಸಕರಿಗೆ ಮನವಿ ನೀಡಿದರು.ಈ ವೇಳೆ ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯಕುಮಾರ, ಪ್ರಧಾನಮಂತ್ರಿ ಪೋಷಣಾ ಅಭಿಯಾನದ ಸಹಾಯಕ ನಿರ್ದೇಶಕ ಭೂಮೇಶ್ ಎ.ಎಚ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ, ತಾಲೂಕಾ ಕಸಾಪ ಅಧ್ಯಕ್ಷ ಗೋಪಾಲ ಭಾಶಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ನಾಯ್ಕ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್.ಪಮ್ಮಾರ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಲೋಕೇಶ ನಾಯ್ಕ, ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜಪ್ಪ ಎಂ.ಜಿ., ಶಿಕ್ಷಣ ಸಂಯೋಜಕ ಮಹೇಶ ಹೆಗಡೆ ಉಪಸ್ಥಿತರಿದ್ದರು. ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಗೀತಾ ಬಿ.ಸಿ‌, ಶೃತಿ ಪಟಗಾರ ನಿರೂಪಿಸಿದರು. ಶಿಕ್ಷಕಿ ನಾಗರತ್ನಾ ನಾಯ್ಕ ಸಂಗಡಿಗರು ಪ್ರಾರ್ಥಿಸಿದರು. ಮೇಧಾ ಹೆಗಡೆ ಸಂಗಡಿಗರು ನಾಡಗೀತೆ ಹಾಡಿದರು. ಚೈತನ್ಯಕುಮಾರ ವಂದಿಸಿದರು.