ಯಲ್ಲಾಪುರ: ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಮೇಲ್ವಿಚಾರಕಿ ವಿರುದ್ಧ ಪ್ರತಿಭಟನೆ

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಮೇಲ್ವಿಚಾರಕಿ ವಿರುದ್ಧ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್ ಮೇಲ್ವಿಚಾರಕಿ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಾರೆ. ಸಮಯಕ್ಕೆ ಸರಿಯಾಗಿ ಆಹಾರ ನೀಡದೇ ತೊಂದರೆ ನೀಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಅನ್ನ, ಆಹಾರ ಬಿಟ್ಟು ಹಾಸ್ಟೆಲ್ ಎದುರು ಪ್ರತಿಭಟನೆ ನಡೆಸಿದರು. ಮೇಲ್ವಿಚಾರಕಿಯನ್ನು ಬೇರೆಡೆ ವರ್ಗಾಯಿಸಿ, ಬೇರೆಯವರನ್ನು ನೇಮಕ ಮಾಡುವಂತೆ ಆಗ್ರಹಿಸಿ, ಮೇಲಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಶಾಸಕ ಹೆಬ್ಬಾರ್ ಅವರ ನಿರ್ದೇಶನದಂತೆ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ ಇಒ ಜಗದೀಶ ಕಮ್ಮಾರ್, ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸುವ ಯತ್ನ ನಡೆಸಿದರು.
ಮೇಲ್ವಿಚಾರಕಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಾಗೂ ಬೇರೆಯವರನ್ನು ನೇಮಿಸುವ ಕುರಿತಿ ಕಮ್ಮಾರ್ ಅವರು ಭರವಸೆ ನೀಡಿದ ನಂತರ ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂಪಡೆದರು. ಇದೇ ವೇಳೆ ಪ.ಪಂ ಸದಸ್ಯೆ ನರ್ಮದಾ ನಾಯ್ಕ ಕೂಡ ಹಾಸ್ಟೆಲ್ ಗೆ ಭೇಟಿ ನೀಡಿ, ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಿದರು.
ಪಾಲಕರ ದೂರಿನಂತೆ ಸೋಮವಾರವಷ್ಟೇ ಶಾಸಕ ಶಿವರಾಮ ಹೆಬ್ಬಾರ್ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿ, ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾರನೇ ದಿನವೇ ವಿದ್ಯಾರ್ಥಿನಿಯರು ಮೇಲ್ವಿಚಾರಕಿ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದಾರೆ.