ಅಂಕೋಲಾ: ಅರಣ್ಯ ಸಾಂದ್ರತೆ ಹೆಚ್ಚಿಸುವ, ಪರಿಸರ ಜಾಗೃತೆ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ದಾಖಲಾರ್ಹ ಮತ್ತು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಅಂಕೋಲಾ ತಾಲೂಕಿನ ಅಚವೆ ಗಜಾನನೋತ್ಸವ ಸಭಾಂಗಣದಲ್ಲಿ ಅರಣ್ಯವಾಸಿಗಳಿಗೆ ಗುರುತಿನ ಪತ್ರವನ್ನ ವಿತರಿಸಿ ಅರಣ್ಯವಾಸಿಗಳನ್ನ ಉದ್ದೇಶಿಸಿ ಮೇಲಿನಂತೆ ಮಾತನಾಡುತ್ತಿದ್ದರು.
ಗಿಡ ನೆಡುವುದು ಮುಖ್ಯವಲ್ಲ. ನೆಟ್ಟಿರುವ ಗಿಡವನ್ನ ರಕ್ಷಿಸಿ, ಪೋಷಿಸುವುದು ಅತೀ ಅವಶ್ಯ. ನೆಟ್ಟಿರುವ ಗಿಡವನ್ನ ಪೋಷಿಸುವಲ್ಲಿ ಅರಣ್ಯವಾಸಿಗಳು ಕಾಳಜಿ ವಹಿಸಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಪ್ರಾಸ್ತವಿಕ ಭಾಷಣವನ್ನ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಜಿಲ್ಲಾ ಸಂಚಾಲಕರಾದ ಬಾಲಚಂದ್ರ ಶೆಟ್ಟಿ ಮಾತನಾಡುತ್ತಾ ನಿರಂತರ ಹೋರಾಟ ಅರಣ್ಯ ಭೂಮಿ ಹಕ್ಕಿಗೆ ಪೂರಕ. ಸಾಂಘಿಕ ಮತ್ತು ಕಾನೂನಾತ್ಮನಕ ಹೋರಾಟವು ಅರಣ್ಯವಾಸಿಗಳ ಹೋರಾಟದ ವಿಶೇಷತೆ. ಮೂರು ದಶಕದಿಂದ ಭೂಮಿ ಹಕ್ಕಿಗೆ ರವೀಂದ್ರ ನಾಯ್ಕರ ಸೇವೆ ಶ್ಲಾಘನೀಯ ಎಂದು ಅವರು ಹೇಳಿದರು. ವೇದಿಕೆಯಲ್ಲಿ ರಮಾನಂದ ನಾಯ್ಕ ಅಚವೆ, ಮಾದೇವ ನಾಯ್ಕ, ಗ್ರಾಮ ಪಂಚಾಯತ ಸದಸ್ಯ ಶಾಂತಾರಾಮ ಗಾಂವಕರ್, ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಕೊಡಿಯ ಮುಂತಾದವರು ಉಪಸ್ಥಿತರಿದ್ದರು.