ಯಲ್ಲಾಪುರ:ಶಿಕ್ಷಕರು ಮಕ್ಕಳಲ್ಲಿ ಅಂಕ ಗಳಿಕೆಯ ಜೊತೆಗೆ ಸಂಸ್ಕಾರ, ಮಾನವೀಯತೆಯನ್ನೂ ಬೆಳೆಸಿದಾಗ ಅಂಕಗಳಿಗೆ ಮೌಲ್ಯ ಬರುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ಶಿಕ್ಷಣ ಇಲಾಖೆ, ಅಂಕೋಲಾ ಅರ್ಬನ್ ಬ್ಯಾಂಕ್, ಶಿಕ್ಷಕರ ಕಲ್ಯಾಣ ನಿಧಿಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಪಾಲಕರು ಕೇವಲ ಮಕ್ಕಳನ್ನು ಹಡೆಯುವ ಕಾರ್ಖಾನೆಗಳಾಗಿದ್ದಾರೆ. ಮಕ್ಕಳಿಗೆ ಸಂಸ್ಕಾರ, ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ಹೊಣೆಯೂ ಶಿಕ್ಷಕರ ಮೇಲೆ ಇದೆ ಎಂದರು.
ರಾಮಕೃಷ್ಣ ದೇಶಭಂಡಾರಿ, ಕಲ್ಪನಾ ಕೊಂಡ್ಲೇಕರ್, ವಂದನಾ ನಾಯಕ, ಲೋಕೇಶ ಗುನಗಾ, ಕಲ್ಪನಾ ನಾಯ್ಕ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಗೌರವಿಸಿ, ಬೀಳ್ಕೊಡಲಾಯಿತು. ಶಿಕ್ಷಕರ ದಿನದ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.
ನಿವೃತ್ತ ಉಪನ್ಯಾಸಕ ಕೆ.ಎನ್ ಹೊಸಮನಿ ಉಪನ್ಯಾಸ ನೀಡಿದರು. ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಸೀಲ್ದಾರ ಗುರುರಾಜ.ಎಂ, ತಾ.ಪಂ ಇಒ ಜಗದೀಶ ಕಮ್ಮಾರ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೆಕರ್, ಬಿಇಒ ಎನ್.ಆರ್.ಹೆಗಡೆ, ಬಿ.ಆರ್.ಸಿ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ, ಶಿಕ್ಷಕರ ಸಂಘಟನೆಗಳ ಅಧ್ಯಕ್ಷರಾದ ಆರ್.ಆರ್.ಭಟ್ಟ, ನಾರಾಯಣ.ಆರ್.ನಾಯಕ, ಚಂದ್ರಶೇಖರ.ಎಸ್.ಸಿ ಇತರರಿದ್ದರು.