ರಚನಾತ್ಮಕ ಸ್ಪರ್ಧಾ ಕಾರ್ಯಕ್ರಮಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ – ಶಿವರಾಮ ಹೆಬ್ಬಾರ್

ಯಲ್ಲಾಪುರ: ರಚನಾತ್ಮಕ ಸ್ಪರ್ಧಾ ಕಾರ್ಯಕ್ರಮಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಮಟ್ಟದ ಮುದ್ದುಕೃಷ್ಣವೇಷ ಫೋಟೋ ಸ್ಪರ್ಧೆಯನ್ನು ಆಯೋಜಿಸಿ, ಸ್ಪರ್ಧಾ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿರುವುದು ಶ್ಲಾಘನೀಯವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಸುಜ್ಞಾನ ಸೇವಾ ಫೌಂಡೇಶನ್, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ವತಿಯಿಂದ ರಂಗ ಸಹ್ಯಾದ್ರಿ ಹಾಗೂ ಗೌತಮ್ ಜುವೆಲ್ಲರ್ಸ್ ಸಹಕಾರದಿಂದ ನಡೆದ ಜಿಲ್ಲಾ ಮಟ್ಟದ ಮುದ್ದುಕೃಷ್ಣವೇಷ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಯಲ್ಲಾಪುರ ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿ, ಸುಜ್ಞಾನ ಫೌಂಡೇಶನ್ ಲೋಗೋ ಅನಾವರಣಗೊಳಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಮಾತನಾಡಿ, ಇಂತಹ ಸ್ಪರ್ಧಾ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಮಹತ್ವವನ್ನು ತಿಳಿಸಿಕೊಡುವ ಕೆಲಸವಾಗುತ್ತಿರುವುದು ಸಂತಸದ ವಿಷಯವಾಗಿದೆ. ಮಕ್ಕಳ ಪ್ರತಿಭೆ ಬೆಳಕಿಗೆ ಬರಲು ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದರು.

ರಂಗಸಹಾದ್ರಿ ಸಂಘಟನೆಯ ಅಧ್ಯಕ್ಷ ಡಿ.ಎನ್.ಗಾಂವ್ಕಾರ್, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪ. ಪಂ. ಅಧ್ಯಕ್ಷೆ ಸುನಂದಾ ದಾಸ್, ಗೌತಮ್ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಶೇಟ್, ಸುಜ್ಞಾನ ಫೌಂಡೇಶನ್ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ, ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್, ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಪತ್ತಾರ್ ಸ್ಟುಡಿಯೋ ಮಾಲೀಕ ಗಣೇಶ ಪತ್ತಾರ್, ಡಾ.ಪ್ರತಿಕ್ಷಾ ಶೇಟ್,ಶ್ವೇತಾ ಹೆಗಡೆ, ಎಸಿಎಫ್ ಗಳಾದ ಹಿಮವತಿ ಭಟ್, ಆನಂದ್ ಎಚ್ ಮತ್ತಿತರು ಉಪಸ್ಥಿತರಿದ್ದರು.