ಕಾರವಾರ: ಕಾರವಾರ ಮೂಲದ ಮನೋಜ ಬಾಡ್ಕರ ಅವರು ಭಾರತೀಯ ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ನೂತನ ಕಮಾಂಡರ್ ಆಗಿ ನೇಮಕಗೊಂಡಿದ್ದಾರೆ.
ಮುಂಬೈನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಇನಸ್ಪೆಕ್ಟರ್ ಆಫ್ ಜನರಲ್ ಆಗಿದ್ದು ಬಡ್ತಿ ಪಡೆದ ಮನೋಜ ವಷಂತ ಬಾಡ್ಕರ ಅವರು ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ಅವರು ಈಗ ಮಹಾರಾಷ್ಟ್ರ, ಗೋವಾ, ಕೇರಳ, ಲಕ್ಷದ್ವೀಪ ದ್ವೀಪಗಳು ಮತ್ತು ಕರ್ನಾಟಕ ಸೇರಿದಂತೆ ಇಡೀ ಪಶ್ಚಿಮ ಪ್ರದೇಶಕ್ಕೆ ಕೋಸ್ಟ್ ಗಾರ್ಡ್ ಸೇವೆಯ ಮುಖ್ಯಸ್ಥರಾಗಿರುತ್ತಾರೆ.
ಅವರು 2006-2008 ರವರೆಗೆ ಕರ್ನಾಟಕ ಹಾಗೂ 2013-2018 ರವರೆಗೆ ಗೋವಾದ ರಾಜ್ಯಗಳಿಗೆ ಭಾರತೀಯ ಕೋಸ್ಟ್ ಗಾರ್ಡ್ ನ ಮುಖ್ಯಸ್ಥರಾಗಿದ್ದರು. 2018 ರಲ್ಲಿ ಐಜಿ ಶ್ರೇಣಿಗೆ ಬಡ್ತಿ ಪಡೆದಿದ್ದ ಅವರು ದೆಹಲಿಯಲ್ಲಿ ಸಿಜಿಎಸ್ಬಿ ಅಧ್ಯಕ್ಷರಾಗಿ ನೇಮಕಗೊಂಡು ಕರ್ತವ್ಯದಲ್ಲಿದ್ದರು.
ಇದೀಗ ಮನೋಜ ಬಾಡ್ಕರ್ ಅವರು ಭಾರತೀಯ ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ನೂತನ ಕಮಾಂಡರ್ ಆಗಿ ನೇಮಕಗೊಂಡು ಕಾರವಾರ ಹಾಗೂ ಇಡೀ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಕಾರವಾರದ ಸೇಂಟ್ ಜೋಸೆಫ್ ಪ್ರೌಢಶಾಲೆ ಮತ್ತು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಇವರು ಕಾರವಾರಕ್ಕೆ ನಿಯಮಿತವಾಗಿ ಆಗಮಿಸಿ ಇಲ್ಲಿನ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.