ಅಂಕೋಲಾ : ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲ್ಪಡುವ ಭ್ರಾತೃತ್ವದ ಸಂಕೇತವಾದ ರಕ್ಷಾಬಂಧನವನ್ನು ಸ್ವಯಂ ಸೇವಕ ಸಂಘದ ಅಂಕೋಲಾ ಘಟಕದ ವತಿಯಿಂದ ಸಂಭ್ರಮ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪತ್ರಕರ್ತ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ನಾಗರಾಜ ಜಾಂಬಳೇಕರ ಸಂಘದ ಧ್ವಜಕ್ಕೆ ರಾಖಿಯನ್ನು ಕಟ್ಟುವದರ ಮೂಲಕ ರಕ್ಷಾ ಬಂಧನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಶತಮಾನೋತ್ಸವದ ಹೊಸ್ತಿನಲ್ಲಿರುವ ಈ ಸಂದರ್ಭದಲ್ಲಿ ಆಚರಿಸುತ್ತಿರುವ ರಕ್ಷಾಬಂಧನ ಕಾರ್ಯಕ್ರಮಕ್ಕೆ ಬಹಳ ವಿಶೇಷತೆ ಇದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಭ್ರಾತೃತ್ವದ ಸಂದೇಶದ ಜೊತೆಗೆ ಇಡೀ ದೇಶದ ಜನರನ್ನು ಒಗ್ಗೂಡಿಸಿದ ಕೀರ್ತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸಲ್ಲುತ್ತದೆ. ಕೇವಲ ಸಹೋದರಿ ಸಹೋದರ ಸಂಬಂಧವಲ್ಲದೆ ಎಲ್ಲ ಜನಸಮುದಾಯದೊಂದಿಗೆ ಭಾರತದಲ್ಲಿ ಆಚರಿಸಲ್ಪಡುವ ಸಹೋದರತ್ವದ ಸಂಕೇತದ ಶ್ರೇಷ್ಠ ಸಂಸ್ಕ್ರತಿಯ ಪ್ರತೀಕವಾದ ರಕ್ಷಾಬಂಧನ ಇಡೀ ವಿಶ್ವದ ಗಮನ ಸೆಳೆಯುವದಲ್ಲದೆ ಭಾರತ ವಿಶ್ವಗುರು ಎನಿಸಿಕೊಳ್ಳುವಲ್ಲಿ ಸಹಕಾರಿಯಾಗಬಲ್ಲದು. ಏನೇ ಬದಲಾವಣೆಗಳಾದರೂ ದೇಶದ ಗಡಿಯಲ್ಲಿ ಸೈನಿಕರು ಮತ್ತು ದೇಶದೊಳಗೆ ಸಂಘ ಪರಿವಾರ ಇರುವವರೆಗೆ ಭಾರತ ಎಂದಿಗೂ ಸುಬಧ್ರವಾಗಿರುವದು ಎಂದರು. ಸಂಘದ ಜಿಲ್ಲಾ ಸಹಕಾರ್ಯವಾಹ ಗಣೇಶ ಖಂಡಗಾರ ಮಾತನಾಡಿ ರಕ್ಷಾಬಂಧನಕ್ಕೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಇಂದಿನ ರಾಜಕೀಯದಿಂದಾಗಿ ರಾಷ್ಡ್ರೀಯ ಭಾವೈಕ್ಯತೆಗೆ ಧಕ್ಕೆಯಾಗುತ್ತಿರುವದು ವಿಷಾದನೀಯ, ದೇಶದ ಪ್ರಜೆಯಾಗಿ ದೇಶಾಭಿಮಾನವನ್ನು ಗಟ್ಟಿಗೊಳಿಸಿಕೊಂಡು ಈ ದೇಶದ ಸಂಸ್ಕ್ರತಿಯನ್ನು ಉಳಿಸಿಕೊಳಬೇಕು ಎಂದರು. ಈ ಸಂದರ್ಭದಲ್ಲಿ ಹಿರಿಯರು ಹಾಗೂ ಸಂಘಚಾಲಕರಾದ ಸುರೇಶ ರಾಯ್ಕರ ಉಪಸ್ಥಿತರಿದ್ದರು. ಸುರೇಶ ಭೋವಿ ವೈಯಕ್ತಿಕ ಗೀತೆಯನ್ನು ಹಾಡಿದರು. ತಾಲೂಕಾ ಸಹ ಕಾರ್ಯವಾಹ ಲಂಬೋಧರ ಗೌಡ ಸ್ವಾಗತಿಸಿದರು. ಸಂಘ ಗೀತೆಯೊಂದಿಗೆ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು. ನಂತರ ಸಂಘದ ಸದಸ್ಯರಾದಿಯಾಗಿ ನೂರಾರು ಸಹೋದರ ಸಹೋದರಿಯರು ಪಟ್ಟಣದ ವ್ಯಾಪ್ತಿಯಲ್ಲಿ ಸಾಮೂಹಿಕವಾಗಿ ಸಾರ್ವಜನಿಕರಿಗೆ ರಾಖಿಯನ್ನು ಕಟ್ಟುವದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು