ದಾಂಡೇಲಿಯ ಡಿ.ಎಫ್.ಎ ಮೈದಾನದಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ

ದಾಂಡೇಲಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿರಸಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಳಿಯಾಳ, ಹಾಗೂ ಅಂಬೇವಾಡಿಯ ಆದರ್ಶ ವಿದ್ಯಾಲಯ ಇವರ ಸಂಯುಕ್ತ ಆಶ್ರಯದಡಿ ದಾಂಡೇಲಿ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖೆ ಕ್ರೀಡಾಕೂಟವನ್ನು ಇಂದು ಶುಕ್ರವಾರ ನಗರದ ಡಿ.ಎಫ್.ಎ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಸುರೇಶ್ ನಾಯಕ ಅವರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಸಹಕಾರಿ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆದಾಗ ಕ್ರೀಡೆಯಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆದರ್ಶ ವಿದ್ಯಾಲಯ ಸಂಸ್ಥೆಯ ಕಾರ್ಯದರ್ಶಿ ನಂದು ಮಾಡ್ದೋಳ್ಕರ್ ಅವರು ಇಂದು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು ಅತ್ಯುತ್ತಮ ಕ್ರೀಡಾಪಟುಗಳಾಗಿ ಜನ್ಮವೆತ್ತ ಊರಿಗೆ ಕೀರ್ತಿಯನ್ನು ತರಬೇಕೆಂದು ಕರೆ ನೀಡಿ ಕ್ರೀಡಾಕೂಟಕ್ಕೆ ಶುಭವನ್ನು ಕೋರಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆದರ್ಶ ವಿದ್ಯಾಲಯದ ಹಳೆ ವಿದ್ಯಾರ್ಥಿ ರಾಮಣ್ಣ ಹರ್ಬಣ್ಣವರ್, ಸಿ.ಆರ್.ಪಿ ಲಲಿತಾ, ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಡೇವಿಡ್ ದಾನಂ, ಎಚ್.ಎಸ್ ಉದ್ದಂಡಿ ಹಾಗೂ ತಾಲೂಕಿನ ವಿವಿಧ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭವನ್ನು ಹಾರೈಸಿದರು.

ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಕೃಷ್ಣ ನಾಯ್ಕ ಅವರು ಸ್ವಾಗತಿಸಿದರು ಲಲಿತ ವಂದಿಸಿದರು ಶಿಕ್ಷಕ ಗಿರೀಶ್.ಆರ್.ಶಿರೋಡ್ಕರ್ ಅವರು ನಿರೂಪಿಸಿದರು. ಕ್ರೀಡಾಕೂಟದಲ್ಲಿ ತಾಲೂಕಿನ 12 ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.