ಅಂಕೋಲಾದಲ್ಲಿ ಶಿಕ್ಷಕ ದಿನಾಚರಣೆಗೆ ಸಿದ್ಧತೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಅಂಕೋಲಾ: ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾ, ಶಿಕ್ಷಕರ ದಿನಾಚರಣೆ ಸಮಿತಿ ಅಂಕೋಲಾ ಹಾಗೂ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಅಂಕೋಲಾ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮನ್ನು ಸೆಪ್ಟೆಂಬರ್ 5 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಗುರುವಾರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್‌ ಕಾರ್ಯಕ್ರಮದ ಕುರಿತು ವಿವರಣೆ ನೀಡಿದರು.
ಸಭಾ ಕಾರ್ಯಕ್ರಮವನ್ನು ಶಾಸಕ ಸತೀಶ ಸೈಲ್ ಉದ್ಘಾಟಿಸಲಿದ್ದಾರೆ. ತಾ.ಪಂ ಆಡಳಿತಾಧಿಕಾರಿ ನಾಗೇಶ ರಾಯ್ಕ‌ ಅಧ್ಯಕ್ಷತೆ ವಹಿಸಲಿದ್ದು, ಸಹಾಯಕ ಆಯುಕ್ತ ಕಲ್ಯಾಣಿ ಕಾಂಬಳೆ, ತಹಶೀಲ್ದಾರ ಅಶೋಕ ಭಟ್ಟ, ಅಂಕೋಲಾ ಅರ್ಬನ್ ಬ್ಯಾಂಕ್‌ ಉಪಾಧ್ಯಕ್ಷ ಗೋವಿಂದರಾಯ ನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದು ವಿಶ್ರಾಂತ ಉಪನ್ಯಾಸಕಿ ಹೊನ್ನಮ್ಮ ನಾಯಕ ಉಪನ್ಯಾಸ ನೀಡಲಿದ್ದಾರೆ .

ಪ್ರೌಢ ಶಾಲಾ ಶಿಕ್ಷಕರು ಹಾಗೂ ಈ ವರ್ಷದಿಂದ ಪ.ಪೂ ಕಾಲೇಜು ಉಪನ್ಯಾಸಕರಿಗೆ ಮತ್ತು ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಶಿಕ್ಷಕರಿಗಾಗಿ ಕ್ರೀಡಾಕೂಟ ಆಯೋಜಿಸಿ, ವಿಜೇತ ಶಿಕ್ಷಕರಿಗೆ ಸೆ 5 ರ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಮತ್ತು ಇತ್ತೀಚೆಗೆ ಅಗಲಿದ ಶಿಕ್ಷಕರ ಸೇವೆಯನ್ನು ಸ್ಮರಿಸಿ ಅವರ ಕುಟುಂಬ ವರ್ಗದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದೆಂದರು.

ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ನಾಯಕ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಮಹೇಶ ನಾಯಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಸರಕಾರಿ ಪ್ರೌಢ ಶಾಲೆ ಮುಖ್ಯಾಧ್ಯಾಪಕ ಭಾಸ್ಕರ ಗಾಂವಕರ್‌, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿ.ಟಿ.ನಾಯಕ, ಶಿಕ್ಷಣ ಸಂಯೋಜಕಿ ರಚನಾ ನಾಯಕ, ಇಲಾಖೆ ನೋಡ ಅಧಿಕಾರಿ ಬಿ.ಎಲ್ ನಾಯ್ಕ ಮತ್ತಿತರು ಇದ್ದರು