ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಹೊಸದಾಗಿ ಯಾರು ಅತಿಕ್ರಮಣ ಮಾಡಬಾರದು.-ಶಾಸಕ ಭೀಮಣ್ಣ ನಾಯ್ಕ್

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಹೊಸದಾಗಿ ಯಾರು ಅತಿಕ್ರಮಣ ಮಾಡಬಾರದು. ಇರುವ ಅತಿಕ್ರಮಣದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕ್ಷೇತ್ರದ ವಿದ್ಯುತ್ ಸಮಸ್ಯೆ ಸರಿಪಡಿಸುವ ಕುರಿತಂತೆ ಕಾನಸೂರು ಹಾಗೂ ಹತ್ತರಗಿಯಲ್ಲಿ ಗ್ರಿಡ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಇಂಧನ ಸಚಿವರೊಂದಿಗೆ ಮಾತನಾಡಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು
ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಹೇಳಿದರು ಅವರು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನ ಕ್ರೀಡಾಪಟುಗಳ ಅನೇಕ ವರ್ಷಗಳ ಬೇಡಿಕೆಯಾದ ಸಿದ್ದಾಪುರದ ತಾಲೂಕಾ ಕ್ರೀಡಾಂಗಣದ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿ ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಮಾತನಾಡಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು
ಪ್ರತಿಭಾವಂತ ಕ್ರೀಡಾಪಟುಗಳ ತವರಾದ ಸಿದ್ದಾಪುರ ತಾಲೂಕಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣವಿಲ್ಲದೇ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ‌. ಇಲ್ಲಿರುವ ತಾಲೂಕಾ ಕ್ರೀಡಾಂಗಣ ಮೂಲಭೂತ ಸೌಲಭ್ಯಗಳಿಲ್ಲದೇ ಸೊರಗುತ್ತಿದ್ದು, ಮೈದಾನದ ಅಭಿವೃದ್ಧಿಗೆ ಕ್ರೀಯಾಯೋಜನೆ ತಯಾರಿಸಿ ಸಂಬಂಧಪಟ್ಟ ಇಲಾಖೆಯ ಸಚಿವರ ಜತೆಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು,
ಕ್ಷೇತ್ರದ ಶಾಸಕನಾಗಿ ಮೂರು ತಿಂಗಳು ಕಳೆದಿವೆ‌. ಗ್ಯಾರೆಂಟಿ ಯೋಜನೆಗಳು ಜಾರಿಗೊಂಡಿವೆ. ಎಲ್ಲಾ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಸರಿಯಾಗಿ ತಲುಪುಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗ್ಯಾರೆಂಟಿ ಯೋಜನೆ ಹಾಗೂ ಹಿಂದಿನ ಕಾಮಗಾರಿಗಳ ಬಿಲ್ ಬಾಕಿಯಿಂದ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ಕೆಲ ಕಾಲ ಸಮಯ ಬೇಕಾಗುತ್ತದೆ ಎಂದು ಸ್ವತಃ ಮುಖ್ಯಮಂತ್ರಿಗಳೆ ಮುಚ್ಚುಮರೆಯಿಲ್ಲದೇ ಒಪ್ಪಿಕೊಂಡಿದ್ದಾರೆ. ಸರ್ಕಾರ ಜಾರಿಗೆ ಬಂದು ಕೆಲ ತಿಂಗಳು ಅಲ್ಪ-ಸ್ವಲ್ಪ ವ್ಯತ್ಯಾಸವಾಗಲಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಲಿದೆ ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಜಿಪಂ ಮಾಜಿ ಸದಸ್ಯ ವಿ.ಎನ್.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.