ಸಿದ್ದಾಪುರ ತಾಲೂಕಾ ಮಟ್ಟದ ಎರಡು ದಿನಗಳ ಕ್ರೀಡಾಕೂಟಕ್ಕೆ ಶಾಸಕ ಭೀಮಣ್ಣ ನಾಯ್ಕ ಚಾಲನೆ

ಸಿದ್ದಾಪುರ: ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ ಕಾಲೇಜು) ಉಪನಿರ್ದೇಶಕರ ಕಚೇರಿ ಹಾಗೂ ಎಂಜಿಸಿ ಪಿಯು ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಿದ್ದಾಪುರ ತಾಲೂಕಾ ಮಟ್ಟದ ಎರಡು ದಿನಗಳ ಕ್ರೀಡಾಕೂಟಕ್ಕೆ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು‌.
ಇಲ್ಲಿಯ ಎಂಜಿಸಿ ಕಾಲೇಜು ಮೈದಾನದಲ್ಲಿ ಆರಂಭವಾದ ಕ್ರೀಡಾಕೂಟದಲ್ಲಿ ತಾಲೂಕಿನ ಎಂಟು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಕ್ರೀಡಾ ಪ್ರತಿಭೆ ಮೆರೆದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಗಳಿಗೆ ಹೆಚ್ಚು ಮಹತ್ವ ನೀಡಬೇಕು. ಸದೃಡ ದೇಹ ಹೊಂದಲು ಕ್ರೀಡೆ ತುಂಬಾ ಮುಖ್ಯವಾಗಿದೆ. ದೈಹಿಕ ಸಂಪತ್ತು ಸದೃಢವಾಗಿರಲು ತಮ್ಮ ಇಷ್ಟದ ಕ್ರೀಡೆಯಲ್ಲಿ ಭಾಗಿಯಾಗಬೇಕು.‌ ನಿಸ್ವಾರ್ಥ ಮನೋಭಾವದಿಂದ ಸಮಾಜ ಸುಧಾರಣೆಯಲ್ಲಿ ತಮ್ಮ ಕೊಡುಗೆ ನೀಡಿ. ವಿದ್ಯಾರ್ಥಿಗಳು ಶಿಸ್ತಿಗೆ ಹೆಚ್ಚಿನ ಗಮನ ಕೊಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ದೈಹಿಕ ಸಾಮರ್ಥ್ಯದ ಕೊರತೆಯಿಂದ ಇತ್ತೀಚೆಗೆ ಅನೇಕ ಅವಘಡಗಳು ಸಂಭವಿಸುತ್ತಿವೆ. ಜೀವನದಲ್ಲಿ ಒಂದು ಕ್ರೀಡೆಯನ್ನು ಅಳವಡಿಸಿಕೊಂಡು ಜೀವನ ಪರ್ಯಂತ ಅದರಲ್ಲಿ ಪಾಲ್ಗೊಳ್ಳಿ ಎಂದ ಅವರು, ಸಿದ್ದಾಪುರಕ್ಕೆ ಒಂದು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಹಾಗೂ ಈಜುಕೊಳ ಮಂಜೂರಿ ಮಾಡಿಸುವಂತೆ ಶಾಸಕರ ಗಮನ ಸೆಳೆದರು.
ಈ ವೇಳೆ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ, ಕೋಲಶಿರ್ಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹೇಮಾವತಿ ಗೌಡರ್, ತಾಲೂಕಾ ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜಪ್ಪ ಎಂ.ಜಿ., ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಎಂಜಿಸಿ ಪಿಯು ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಕೊಂಡಗೂಳಿಕರ ಸ್ವಾಗತಿಸಿದರು. ಹೆಗ್ಗರಣಿ ಕಾಲೇಜಿನ ವಿಘ್ನೇಶ್ವರ ಭಟ್ ನಿರೂಪಿಸಿದರು.