ಪರಿಸರ ಕಾಳಜಿ‌ ಮರೆಯದ ಅರಣ್ಯ ವಾಸಿಗಳು; 2 ಲಕ್ಷ ಗಿಡ ನೆಟ್ಟು ದಾಖಲೆ!

ಕಾರವಾರ: ಕಾಡಿನಂಚಿನಲ್ಲಿದ್ದರೂ ಅರಣ್ಯವಾಸಿಗಳು ಯಾವತ್ತೂ ಪರಿಸರ ಕಾಳಜಿ ಮರೆತವರಲ್ಲ ಅನ್ನೋದಕ್ಕೆ ಈ ಸ್ಟೋರಿನೇ ಸಾಕ್ಷಿ. ಇವ್ರೆಲ್ಲ ಕಾನನದಲ್ಲಿ ವಾಸಿಸುತ್ತಿದ್ದರೂ ಪರಿಸರ ಜಾಗೃತಿ ಹಾಗೂ ಅರಣ್ಯ ಸಂರಕ್ಷಣೆ ಉದ್ದೇಶದಿಂದ ಲಕ್ಷ ಗಿಡ ನೆಡುವ ಅಭಿಯಾನ ನಡೆಸಿದ್ದಾರೆ. ಈ ಮೂಲಕ ಕಾಡಿನ ಮಕ್ಕಳು ಯಾವತ್ತಿದ್ರೂ ಕಾಡಿನ ರಕ್ಷಕರು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

2 ಲಕ್ಷ ಗಿಡ ನಾಟಿ
ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಜುಲೈ 31ರಂದು ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿತ್ತು. ಅದರಂತೆ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದಲ್ಲಿ ಅರಣ್ಯವಾಸಿಗಳು ಸಕ್ರಿಯವಾಗಿ ಪಾಲ್ಗೊಂಡು ಈವರೆಗೆ 2 ಲಕ್ಷ ಗಿಡಗಳನ್ನ ನೆಡುವ ಮೂಲಕ ದಾಖಲೆ ಮಾಡಿದ್ದಾರೆ.

ಅರಣ್ಯ ವಾಸಿಗಳ ಸಾಧನೆ
ಈ ಅಭಿಯಾನದಲ್ಲಿ ಉತ್ತರ ಕನ್ನಡ ಜಿಲ್ಲೆಯ 167 ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 803 ಹಳ್ಳಿಗಳಲ್ಲಿ 41 ಸಾವಿರ ಅರಣ್ಯವಾಸಿ ಕುಟುಂಬಗಳಿಂದ 2 ಲಕ್ಷಕ್ಕೂ ಮಿಕ್ಕಿ ಗಿಡಗಳನ್ನ ನೆಡಲಾಗಿದೆ. ಶಿರಸಿ, ಸಿದ್ದಾಪುರ ಎರಡು ತಾಲೂಕಿನಲ್ಲಿ ಅತೀ ಹೆಚ್ಚು, ಅಂದರೆ ತಲಾ 25ರಿಂದ 35 ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು ನೆಡಲಾಗಿದೆ.

ಯಾವುದೆಲ್ಲ ಗಿಡಗಳು?
ಅರಣ್ಯವಾಸಿಗಳು ಅರಣ್ಯ ಪ್ರದೇಶದಲ್ಲಿ ಮಾವು, ಹಲಸು, ನೆರಳೆ, ಉಪ್ಪಗೆ, ಸಿಲ್ವರ್, ಚಿಕ್ಕು, ಗೇರು, ಸಾಗುವನಿ, ಪೇರಲೆ, ಮುರುಗಲು ಮುಂತಾದ ಗಿಡಗಳನ್ನು ಹೆಚ್ಚಿನ ಆಸಕ್ತಿಯಿಂದ ನೆಟ್ಟಿದ್ದಾರೆ. ಈ ಅಭಿಯಾನದಲ್ಲಿ ಮಹಿಳೆಯರು ಮತ್ತು ಕುಟುಂಬದ ಹಿರಿಯರು, ವೃದ್ಧರು ಕೂಡ ವಿಶೇಷ ಆಸಕ್ತಿಯಿಂದ ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಿದ್ದರು.