ಯಲ್ಲಾಪುರ: ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ರಕ್ಷಾ ಬಂಧನ ಸಪ್ತಾಹ

ಯಲ್ಲಾಪುರ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ರಕ್ಷಾ ಬಂಧನ ಸಪ್ತಾಹ ಗುರುವಾರ ಆರಂಭಗೊಂಡಿತು. ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಶಿವಲೀಲಾ ಪತ್ರಕರ್ತರಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಸಪ್ತಾಹಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಬಾಂಧವ್ಯ ಬಲಗೊಳಿಸುವ ಸಲುವಾಗಿ ರಕ್ಷಾಬಂಧನ ಆಚರಿಸಲಾಗುತ್ತದೆ. ಹಣದ ಹಿಂದೆ ಹೋಗಿ ತೋರಿಕೆಯ ಅಂತಸ್ತನ್ನು ಪ್ರದರ್ಶಿಸುವ ದಿನಮಾನಗಳಲ್ಲಿ ಪ್ರೀತಿ ವಿಶ್ವಾಸದಿಂದ ಸಂಬಂಧ ಎಳೆ ಶಿಥಿಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಹೋದರಿ ಸಹೋದರನಿಗೆ ರಕ್ಷೆ ಕಟ್ಟುವ ಮೂಲಕ ಬಾಂಧವ್ಯದ ಮಹತ್ವ ಸಾರಲಾಗುತ್ತಿದೆ ಎಂದರು.
ಹಿರಿಯ ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಹಬ್ಬಗಳು ಬಾಂಧವ್ಯ ಬೆಸೆಯುವ ಕಾರ್ಯ ಮಾಡುತ್ತಿವೆ. ಈಶ್ವರೀಯ ವಿಶ್ವವಿದ್ಯಾಲಯದವರು ಪ್ರತಿ ವರ್ಷ ಪತ್ರಕರ್ತರಿಗೆ ರಕ್ಷೆ ಕಟ್ಟುವ ಮೂಲಕ ಸೋದರತ್ವದ ಗೌರವ ತೋರುತ್ತಿರುವುದು ಅಭಿಮಾನದ ಸಂಗತಿ ಎಂದರು.
ಬ್ರಹ್ಮಕುಮಾರಿ ವೀಣಕ್ಕ, ದಾಕ್ಷಾಯಿಣಿ ಭಟ್ಟ, ಪತ್ರಕರ್ತರಾದ ಶಂಕರ ಭಟ್ಟ ತಾರಿಕಮಕ್ಕಿ, ಸುಬ್ರಾಯ ಬಿದ್ರೆಮನೆ, ಶ್ರೀಧರ ಅಣಲಗಾರ, ವಿ.ಜಿ.ಗಾಂವ್ಕರ ಇತರರಿದ್ದರು.