ಅಂಕೋಲಾ : ಕನ್ನಡದ ನೆಲದಲ್ಲಿ ಕನ್ನಡತನ ಗಟ್ಟಿಯಾಗಿರಬೇಕು. ಇಂದು ಕನ್ನಡದ ಉಳಿವಿಗಾಗಿ ಕನ್ನಡಿಗರೇ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವದು ದುರದೃಷ್ಠಕರ ಎಂದು ವಿಶ್ರಾಂತ ಪ್ರಾಚಾರ್ಯ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಡಾ.ಆರ್ ಜಿ ಗುಂದಿ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಅಂಕೋಲಾ ತಾಲೂಕು ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಬ್ರುವಾಡ ಇದರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕನ್ನಡ ಶುದ್ಧ ಬರಹ ಮತ್ತು ಸ್ಪಷ್ಠ ಉಚ್ಚಾರ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಾಗತೀಕರಣದಿಂದ ಇಂಗ್ಲೀಷ ಭಾಷೆಯ ಬಳಕೆ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ವ್ಯಾವಹಾರಿಕವಾಗಿ ಇಂಗ್ಲೀಷ ಬಳಕೆಯೂ ಇರಲಿ ಆದರೆ ಕನ್ನಡದ ಮೇಲಿನ ಅಭಿಮಾನ ಗಟ್ಟಿಯಾಗಿರಬೇಕು ನಾವು ಕನ್ನಡಿಗರೇ ಕನ್ನಡತನವನ್ನು ಉಳಿಸಿಕೊಳ್ಳದಿದ್ದರೆ ಕನ್ನಡವನ್ನು ಉಳಿಸುವವರಾರು ಎಂದರು.
ವಿಶ್ರಾಂತ ಪ್ರಾಚಾರ್ಯ ಪ್ರೊ.ಮೋಹನ ಹಬ್ಬು ಮಾತನಾಡಿ 1956 ರಲ್ಲಿ ಭಾಷಾ ನೀತಿಯಲ್ಲಿ ರಾಜ್ಯ ವಿಂಗಡನೆಯಾದ ನಂತರ ಭಾಷೆಗಳ ಕುರಿತು ಸ್ಪಷ್ಠ ನಿಲುವನ್ನು ತಾಳಲು ಯಾವ ಸರಕಾರಗಳೂ ಪ್ರಯತ್ನಿಸಲಿಲ್ಲ ಅದರ ಫಲವಾಗಿಯೇ ಇಂದು ಪರಭಾಷೆಗಳು ಕನ್ನಡದ ಮೇಲೆ ಆಕ್ರಮಣ ಮಾಡುತ್ತಿವೆ ಎಂದರು. ಇದೇ ವೇಳೆ ಅವರು ಕನ್ನಡತನದ ಕುರಿತು ಸ್ವರಚಿತ ಕವನವನ್ನು ವಾಚಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ ಶಿಕ್ಷಣದ ಮಾದ್ಯಮ ಕನ್ನಡವೋ ಇಂಗ್ಲೀಷೋ ಮುಖ್ಯವಲ್ಲ, ಕಲಿತ ಭಾಷೆಯಲ್ಲೇ ಸಾಧನೆ ಮಾಡುವದು ಮುಖ್ಯ. ಕನ್ನಡ ಮಾದ್ಯಮದಲ್ಲೇ ಕಲಿತವರೂ ಉನ್ನತ ಸ್ಥಾನಕ್ಕೇರಿದ್ದಾರೆ. ವಿದೇಶಗಳಲ್ಲೂ ಸಾಧನೆ ಮಾಡಿದವರಿದ್ದಾರೆ. ಕನ್ನಡ ಭಾಷೆಗೆ ಮಾತೃಸ್ಥಾನ ನೀಡಬೇಕು. ಮನೆ ಭಾಷೆಗಳಲ್ಲಿ ವೈವಿದ್ಯತೆಗಳಿದ್ದರೂ ಗ್ರಾಂಥಿಕ ರೂಪ ಕೊಟ್ಟಾಗ ಕನ್ನಡದ ಆಡು ಭಾಷೆಗಳನ್ನೂ ಉಳಿಸಿದಂತಾಗುತ್ತದೆ. ಕನ್ನಡದ ಬಗ್ಗೆ ಅರಿವು ಮೂಡಿಸಲು ಸಾಹಿತಿಗಳು ಮತ್ತು ಸಾಹಿತ್ಯ ವಿದ್ಯಾರ್ಥಿಗಳ ಮುಂದೆ ಬರಬೇಕು ಎಂದರು.
ಮಹಾಂತೇಶ ರೇವಡಿ ಮಾತನಾಡಿ ನಿಜವಾದ ಕನ್ನಡಿಗನಿಗೆ ಕನ್ನಡ ಅನ್ನದ ಭಾಷೆಯಾಗಬೇಕು. ಕನ್ನಡ ಭಾಷೆಯಲ್ಲಿನ ಸೊಬಗು ಬೇರೆ ಯಾವ ಭಾಷೆಯಲ್ಲೂ ಇಲ್ಲ ಎಂದರು ಅಲ್ಲದೆ ನಶಿಸುತ್ತಿರುವ ಭಾಷೆಗಳಲ್ಲಿ ಕನ್ನಡವೂ ಸೇರ್ಪಡೆಯಾಗಿರುವದು ದುಖಃಕರ ಎಂದು ಖೇದ ವ್ಯಕ್ತಪಡಿಸಿದರು. ಸ್ಪರ್ಧೆಯ ಬಹುಮಾನಗಳ ಪ್ರಾಯೋಜಕರಾದ ಅಬ್ದುಲ್ ಕರೀಮ ಶೇಖ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕೆಎಲ್ಇ ಶಿಕ್ಷಣ ಸಂಸ್ಥೆಯ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಹೆಗಡೆ ಕನ್ನಡದ ಭಾಷೆಗಾಗಿ ಕಸಾಪ ಘಟಕ ಕೈಗೊಳ್ಳುತ್ತಿರುವ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ರಫೀಕ್ ಶೇಖ, ಲೇಖಕ ಸುಜೀತ ನಾಯ್ಕ, ಎಂಬಿ ಆಗೇರ, ಉಪನ್ಯಾಸಕಿ ಡಾ.ಪುಷ್ಪಾ ನಾಯ್ಕ,
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗಜೇಂದ್ರ ನಾಯ್ಕ, ಎಸ್ ಡಿ ಎಂ ಸಿ ಅಧ್ಯಕ್ಷ ವಿಜಯ ನಾಯ್ಕ,
ಉಪಾಧ್ಯಕ್ಷೆ ರಂಜಿತಾ ನಾಯ್ಕ, ಬಿಎಡ್ ಪ್ರಶಿಕ್ಷಣಾರ್ಥಿಗಳು ಹಾಗೂ ಶಾಲೆಯ ಬೋಧಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ಬಾಲಚಂದ್ರ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಾಧ್ಯಾಪಕ ಮಾರುತಿ ಲಕ್ಷ್ಮೇಶ್ವರ ಸ್ವಾಗತಿಸಿದರು. ಬಿ ಎಡ್ ಪ್ರಶಿಕ್ಷಣಾರ್ಥಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಕು. ಉನ್ನತಿ ನಾಯ್ಕ ಶುಶ್ರಾವ್ಯವಾಗಿ ಭಕ್ತಿಗೀತೆಯೊಂದನ್ನು ಹಾಡಿ ಗಮನಸೆಳೆದರು.