ಜೋಯಿಡಾ ತಾಲ್ಲೂಕಿನ ಚಾಪೋಲಿಯಲ್ಲಿ ಶಿಥಿಲಗೊಂಡಿರುವ ಸರಕಾರಿ ಹಿ.ಪ್ರಾ.ಶಾಲೆಯ ಕಟ್ಟಡ

ಜೋಯಿಡಾ : ತಾಲ್ಲೂಕಿನ ಗಾಂಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾಪೋಲಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಜೀವ ಭಯದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದ ಸ್ಥಿತಿ ಇಲ್ಲಿದೆ.

ಇಲ್ಲಿಯ ಶಾಲಾ ಕಟ್ಟಡವು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವುದರಿಂದ ಒಂದು ಕೊಠಡಿಯನ್ನು ಈಗಾಗಲೆ ಮುಚ್ಚಲಾಗಿದೆ. ಆದ್ದರಿಂದ ಎರಡನೇ ಕಟ್ಟಡದಲ್ಲಿ ನಾಲ್ವರು ಶಿಕ್ಷಕರು ಒಂದೇ ಕೊಠಡಿಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಪಾಠ ಮಾಡಬೇಕಾಗಿದೆ. ಆದರೆ, ಕಳೆದ ವಾರ ಸುರಿದ ಭಾರಿ ಮಳೆಗೆ ಆ ಕೊಠಡಿಯ ಗೋಡೆಯೂ ಕುಸಿದ ಪರಿಣಾಮವಾಗಿ ಆ ಕೊಠಡಿಯಲ್ಲೂ ವಿದ್ಯಾರ್ಥಿಗಳ ತರಗತಿಯನ್ನು ನಿಲ್ಲಿಸಿದ್ದಾರೆ. ಹೀಗಾಗಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಕುಳಿತುಕೊಳ್ಳುವ ಕೊಠಡಿಯಲ್ಲಿ ಮತ್ತು ಅದರ ವರಾಂಡಾದಲ್ಲಿ ಶಿಕ್ಷಕರು ಕುಳಿತು ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಪ್ರಸಂಗ ಎದುರಾಗಿದೆ.

ಶಿಕ್ಷಣ ಇಲಾಖೆಯವರು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಶಾಲೆಯ ಸಮಸ್ಯೆಯನ್ನು ಬಗೆಹರಿಸಿ ಮಕ್ಕಳ ಶೈಕ್ಷಣಿಕ ಕಾಳಜಿಗೆ ಸ್ಪಂದಿಸಬೇಕಾಗಿದೆ.