ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯ

ಅಂಕೋಲಾ: ಅಂಕೋಲಾ ತಾಲೂಕಿನಿಂದ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ತಾಲೂಕಿನ ಮೀನುಗಾರರು ತಹಶೀಲ್ಧಾರರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಅಂಕೋಲಾ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮೀನುಗಾರರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ, ಸರ್ಕಾರದ ಯೋಜನೆಗಳ ಕುರಿತು ಮೀನುಗಾರರಿಗೆ ಸರಿಯಾಗಿ ಮಾಹಿತಿ ನೀಡದೇ ತೊಂದರೆ ನೀಡುತ್ತಿದ್ಧಾರೆ, ದೋಣಿ ಮತ್ತು ಬೋಟುಗಳ ನೋಂದಣಿ, ಮರುನೋಂದಣಿ, ಡಿಸೆಲ್ ಖಾತೆ ಪುಸ್ತಕ ಮೊದಲಾದ ಅಗತ್ಯ ಕೆಲಸಗಳಿಗೆ ಅನವಶ್ಯಕವಾಗಿ ಕಚೇರಿ ಅಲೆಯುವಂತೆ ಮಾಡಲಾಗುತ್ತಿದ್ದು ಏಜಂಟರ ಮೂಲಕ ಹಣದ ಬೇಡಿಕೆ
ಇಡುವುದನ್ನು ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಕೆಲವೇ ದಿನಗಳಲ್ಲಿ ಮೀನುಗಾರಿಕೆ ಋತು ಆರಂಭವಾಗಿದ್ದು ದೋಣಿ ಮತ್ತು ಬೋಟುಗಳ ನೋಂದಣಿ ಹಾಗೂ ಇನ್ನಿತರ ಕೆಲಸಗಳು ಮೀನುಗಾರಿಕೆ ಇಲಾಖೆ ಮೂಲಕ ಆಗಬೇಕಿದೆ ಅಂಕೋಲಾ ಮೀನುಗಾರಿಕೆ ಸಹಾಯಕ ನಿರ್ದೇಶಕಿ ಕಾರ್ಯವೈಕರಿಯಿಂದ ಬೇಸತ್ತ ಮೀನುಗಾರರು ಕಳೆದ 5 ತಿಂಗಳುಗಳಿಂದ ಅವರ ವರ್ಗಾವಣೆಗೆ ಒತ್ತಾಯ ಮಾಡುತ್ತಲೇ ಬಂದಿದ್ದು ಮುಂದಿನ 7 ದಿನಗಳಲ್ಲಿ ವರ್ಗಾವಣೆಗೆ ಕ್ರಮ ಕೈಗೊಳ್ಳದಿದ್ದರೆ ಮೀನುಗಾರಿಕೆ ಕಚೇರಿಗೆ ಬೀಗ ಹಾಕಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಮನವಿ ಮೂಲಕ ಎಚ್ಚರಿಕೆ ನೀಡಲಾಗಿದೆ.
ಅಂಕೋಲಾ ತಹಶೀಲ್ಧಾರ ಪ್ರವೀಣ ಹುಚ್ಚಣ್ಣನವರ್ ಮನವಿ ಸ್ವೀಕರಿಸಿದರು.
ಅಂಕೋಲಾ ತಾಲೂಕು ಮೀನುಗಾರರ ಒಕ್ಕೂಟದ ಹೋರಾಟ ಸಮಿತಿಯ ಸುಂದರ ಖಾರ್ವಿ, ರಾಜು ಹರಿಕಂತ್ರ, ರವೀಶ ಖಾರ್ವಿ ಮತ್ತು ಮೀನುಗಾರ ಪ್ರಮುಖರು ಉಪಸ್ಥಿತರಿದ್ದರು.