ಅಂಕೋಲಾ : ಕರ್ನಾಟಕ ಸಂಘದ ವತಿಯಿಂದ ಗುರುವಾರ ೮೦ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿರಿಯ ಸಾಹಿತಿ, ಪ್ರಕಾಶಕ ವಿಷ್ಣು ನಾಯ್ಕ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇಲ್ಲಿಯ ಅಂಬಾರಕೊಡ್ಲದ ಶ್ರೀರಾಘವೇಂದ್ರ ಪ್ರಕಾಶನದ ಅಂಗಳದಲ್ಲಿ ಸರಳವಾಗಿ ಕಾರ್ಯಕ್ರಮ ಜರುಗಿತು.
ಮಾದರಿ ವ್ಯಕ್ತಿತ್ವ :
ಅಧ್ಯಕ್ಷತೆ ವಹಿಸಿದ್ದ ಕವಯತ್ರಿ, ಕರ್ನಾಟಕ ಸಂಘದ ಉಪಾಧ್ಯಕ್ಷೆ ಹೊನ್ನಮ್ಮ ನಾಯಕ ಮಾತನಾಡಿ, ನಾವು ಬೆಳೆಯುವುದರ ಜೊತೆಯಲ್ಲೇ ನಮ್ಮ ಸಂಗಡ ಇದ್ದವರನ್ನೂ ಬೆಳೆಸುವ ಮೂಲಕ ವಿಷ್ಣು ನಾಯ್ಕ ಅವರು ಮಹತ್ತರ ಕಾರ್ಯ ಮಾಡಿದ್ದಾರೆ. ಅಧ್ಯಾಪಕರಾಗಿ, ಸಾಹಿತಿಯಾಗಿ, ಪ್ರಕಾಶಕರಾಗಿ ಸಾಂಸ್ಕೃತಿಕ ರಾಯಭಾರಿಯಾಗಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯ ಎಂದರು. ಸಾಹಿತಿ ವಿಠ್ಠಲ ಗಾಂವಕರ್ ಮಾತನಾಡಿ, ವಿಷ್ಣು ನಾಯ್ಕ ಅವರ ಬದುಕೇ ಸುಂದರ ಕಾವ್ಯ. ಸೃಜನಶೀಲತೆಯಿಂದ ಇವರು ಬಹು ಎತ್ತರಕ್ಕೆ ಬೆಳೆದ ರೀತಿ ಎಲ್ಲರಿಗೂ ಮಾದರಿ ಎಂದರು.
ನಿವೃತ್ತ ಮುಖ್ಯಾಧ್ಯಾಪಕ ರವೀಂದ್ರ ಕೇಣಿ, ನಿವೃತ್ತ ಉಪನ್ಯಾಸಕ ಶ್ರೀಧರ ನಾಯಕ ಮಾತನಾಡಿ ವಿಷ್ಣು ನಾಯ್ಕ ಅವರೊಂದಿಗಿನ ಒಡನಾಟ ಮೆಲಕು ಹಾಕಿದರು.
ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮಹೇಶ ನಾಯಕ ಸ್ವಾಗತಿಸಿದರು. ವಿಷ್ಣು ನಾಯ್ಕ ಅವರ ಸಹೋದರ ಅನಂತ ನಾಯ್ಕ ಧನ್ಯವಾದ ಅರ್ಪಿಸಿದರು. ಕರ್ನಾಟಕ ಸಂಘದ ಸದಸ್ಯರಾದ ಡಾ. ಅರ್ಚನಾ ನಾಯಕ ವಂದಿಸಿದರು. ಡಾ. ದಿನಕರ ದೇಸಾಯಿ ಅವರ ಮೊಮ್ಮಗ ರಂಜಿತ ಪ್ರಧಾನ , ಸಂಘದ ಖಜಾಂಚಿ ಎಸ್. ಆರ್. ನಾಯಕ, ಪ್ರಮುಖರಾದ ಪ್ರಭಾಕರ ಬಂಟ, ಡಾ. ವಿನಾಯಕ ಹೆಗಡೆ, ಎಂ.ಎಂ.ಕರ್ಕಿಕರ್, ದತ್ತು ನಾಯ್ಕ ಉಪಸ್ಥಿತರಿದ್ದರು.