ಕಳ್ಳರ ಜೊತೆ ಕೈ ಜೋಡಿಸಿದ ಹೆಡ್ ಕಾನ್ಸ್ಟೇಬಲ್ ಅರೆಸ್ಟ್

ಬಳ್ಳಾರಿ, ಸೆ.21: ಪೊಲೀಸಪ್ಪನೇ ಕಳ್ಳರ ಜೊತೆ ಕೈ ಜೋಡಿಸಿ ಖದೀಮನಾದ ಕತೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಮೆಹಬೂಬ್ ಪಾಷಾ ಎಂಬುವವರು ಕಳ್ಳರ ಜೊತೆ ಕೈ ಜೋಡಿಸಿ ಲಕ್ಷ ಲಕ್ಷ ನುಂಗಿದ್ದಾರೆ. ಈ ಖದೀಮ ಕಳ್ಳರು ಕದ್ದ ಮಾಲಲ್ಲೇ ತನಗೂ ಪಾಲು ಪಡೆದು ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದ.

ಸೆ.12ರಂದು ಬೆಳಗಿನ ಜಾವ ರಾಯದುರ್ಗಾ ಬಸ್ ನಿಲ್ದಾಣದ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರದ ಪುಡಿ ಎರಚಿ 22 ಲಕ್ಷ 99 ಸಾವಿರ ನಗದು ಮತ್ತು 318 ಗ್ರಾಂ ಬಂಗಾರ ಕಳ್ಳತನ ಮಾಡಲಾಗಿತ್ತು. ತೌಸೀಫ್, ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕಾ ಅಲಿ ರೆಹಮಾನ್, ಆರೀಫ್ ಸೇರಿ ಏಳು ಜನರಿಂದ ದರೋಡೆ ಮಾಡಲಾಗಿತ್ತು. ಈ ದರೋಡೆ ಟೀಮ್ ಜೊತೆಗೆ ಸೇರಿ ಹೆಡ್ ಕಾನ್ಸ್ಟೇಬಲ್ ಮೆಹಬೂಬ್ ಪಾಷಾ ಹಣಕೊಳ್ಳೆ ಹೊಡೆದಿದ್ದ. ಇನ್ನು ಹೆಡ್ ಕಾನ್ಸಟೇಬಲ್ ಮಹಬೂಬ್ ಪಾಷ ಮತ್ತು ಪ್ರಮುಖ ಆರೋಪಿ ಅಸೀಫ್ ಆತ್ಮೀಯ ಗೆಳೆಯರು.

ಇನ್ನು ಕಳ್ಳತನ ಪ್ರಕರಣ ಸ್ಟೇಷನ್ ಮೆಟ್ಟಿಲು ಹತ್ತುತ್ತಿದ್ದಂತೆ ಪ್ರಕರಣ ಬಯಲಿಗೆ ಬಂದಿದೆ. ಹೆಡ್ ಕಾನ್ಸಟೇಬಲ್ ಕಳ್ಳಾಟ ಬಯಲಾಗಿದೆ. ದರೋಡೆ ಮಾಡಿದ ಹಣದಲ್ಲಿ ಹೆಡ್ ಕಾನ್ಸಟೇಬಲ್ ಮೆಹಬೂಬ್ ಒಂಭತ್ತು ಲಕ್ಷ ಹಣವನ್ನು ಪಡೆದಿದ್ದ. ಸದ್ಯ15 ಲಕ್ಷ 91ಸಾವಿರ ನಗದು, 116 ಗ್ರಾಂ ರಿಕವರಿ ಮಾಡಲಾಗಿದೆ. ಆರೋಪಿ ಅರೀಫ್ ಈ ಮೊದಲು ಹೋಮ್ ಗಾರ್ಡ್ ಕೆಲಸ ಮಾಡುತ್ತಿದ್ದ. ಘಟನೆ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬ್ರೂಸ್ ಪೇಟೆ ಕಾನಸ್ಟೇಬಲ್ ಮೆಹಬೂಬ್ ಪಾಷಾ ಅರೆಸ್ಟ್ ಮಾಡಿ ಸಸ್ಪೆಂಡ್ ಮಾಡಲಾಗಿದೆ ಎಂದು ಎಸ್ಪಿ ಡಾ. ಶೋಭಾರಾಣಿ ಸ್ಪಷ್ಟಣೆ ನೀಡಿದ್ದಾರೆ.