ರೋಟರಿ ಕ್ಲಬ್ ರೂರಲ್ ಸದಸ್ಯರಿಂದ ಭತ್ತದ ನಾಟಿ ಹಾಗೂ ಕೃಷಿ ಸಾಮಗ್ರಿ ವಿತರಣೆ.

ಅಂಕೋಲಾ : ಇಂದಿನ ದಿನಗಳಲ್ಲಿ ಕೃಷಿ ಕಾರ್ಯ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕೃಷಿಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರೈತರ ಜೊತೆ ಕೆಲಸ ಮಾಡಿರುವದು ನಮಗೂ ಹೆಚ್ಚಿನ ಖುಷಿ ನೀಡಿದೆ ಎಂದು ರೋಟರಿ ಕ್ಲಬ್ ರೂರಲ್ ಅಧ್ಯಕ್ಷ ಹರ್ಷ ನಾಯಕ ಹೇಳಿದರು
ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಲ್ಲಿನ ರೋಟರಿ ಕ್ಲಬ್ ಆಫ್ ಅಂಕೋಲಾ ರೂರಲ್ ನವರು ತಳಗದ್ದೆಯಲ್ಲಿ ಸ್ವತಃ ಗದ್ದೆಗಿಳಿದು ಭತ್ತದ ನಾಟಿ ಮಾಡಿ ಕೃಷಿಕರಿಗೆ ಕೃಷಿ ಸಾಮಗ್ರಿ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೋಟರಿ ಕ್ಲಬ್ ರೂರಲ್ ಸದಸ್ಯರು ಮಂಗಳವಾರ ಬೆಳಿಗ್ಗೆ ತಳಗದ್ದೆಯ ರಾಕು ಗೌಡ ಇವರ ಭತ್ತದೆ ಗದ್ದೆಗೆ ತೆರಳಿ ಅಲ್ಲಿನ ರೈತರಿಂದ ಉಳುಮೆ ಮತ್ತು ನಾಟಿಯ ಮಾಹಿತಿ ಪಡೆದರು. ನಂತರ ತಾವೇ ಸ್ವತಃ ಗದ್ದೆಗಿಳಿದು ಟ್ರ್ಯಾಕ್ಟರ್ ಮೂಲಕ ಗದ್ದೆಯನ್ನು ಊಳುವದನ್ನು ಮಾಡಿದರಲ್ಲದೆ ಕೃಷಿಕರ ಜೊತೆ ಭತ್ತದ ಸಸಿಯನ್ನು ನಾಡಿ ಮಾಡಿ ಕೃಷಿಕರನ್ನು ಪ್ರೋತ್ಸಾಹಿಸಿದರು. ನಾಯಕ ಸೌಹಾರ್ದ ಸಹಕಾರಿ ನಿಯಮಿತದ ವತಿಯಿಂದ ಪ್ರಾಯೋಜಿಸಿದ ಕೃಷಿ ಸಾಮಗ್ರಿಗಳನ್ನು ರೈತರಿಗೆ ವಿತರಿಸಿದರು.
ಡಾ.ಸಂಜು ನಾಯಕ ಮಾತನಾಡಿ ರೈತನೇ ಈ ದೇಶದ ಬೆನ್ನೆಲುಬು, ರೈತರನ್ನು ಪ್ರೋತ್ಸಾಹಿಸುವದು ಒಂದು ಶ್ರೇಷ್ಠ ಕೆಲಸ. ರೈತರು ಕೂಡ ಉದ್ಯೋಗಿಗಳು, ಉದ್ಯಮಿಗಳಷ್ಟೇ ಸಮಾನರು ಅವರನ್ನು ಗೌರವಿಸುವದು ಕೂಡ ಸಮಾಜದ ಒಂದು ಭಾಗವಾಗಬೇಕು. ಯುವ ಜನರು ಕೃಷಿ ಕಾರ್ಯಗಳಲ್ಲಿ ಆಸಕ್ತಿ ವಹಿಸಿದರೆ ಕೃಷಿಯನ್ನು ಉಳಿಸಬಹುದು ಎಂದರು.
ರೈತರ ಪರವಾಗಿ ವಿಠ್ಠಲ ಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದ ರೈತರು ಕೃಷಿ ಕಾರ್ಯಗಳಿಂದ ಹಿಂದೆ ಸರಿಯುತ್ತಿದ್ದಾರೆ. ಕೂಲಿಗಳು ಸಿಗುತ್ತಿಲ್ಲ, ಬೆಳೆಗೆ ಸೂಕ್ತ ಮಾರುಕಟ್ಟೆಯಿಲ್ಲ, ಹವಾಮಾನ ವೈಪರೀತ್ಯ ಕಾಡುತ್ತದೆ ಆದರೂ ಕೆಲವು ರೈತರು ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ. ಇಂಥವರನ್ನು ಪ್ರೋತ್ಸಾಹಿಸುತ್ತಿರುವ ರೋಟರಿ ಸಂಸ್ಥೆಗೆ ಧನ್ಯವಾದಗಳು ಎಂದರು.
ಕೃಷಿ ಸಾಮಗ್ರಿ ವಿತರಿಸಿದ್ದಕ್ಕೆ ರೋಟರಿ ಸಂಸ್ಥೆಗೆ ಕೃಷಿಕ ಮಹಿಳೆಯರು ಧನ್ಯವಾದ ಅರ್ಪಿಸಿದರು. ಈ ವೇಳೆ ಕಾರ್ಯದರ್ಶಿ ಮಹೇಶ ಪೈ, ಖಜಾಂಚಿ ಸದಾನಂದ ನಾಯಕ, ನೇತೃತ್ವ ವಹಿಸಿದ್ದ ಕೌಸ್ತುಭ ನಾಯಕ, ಸದಸ್ಯರಾದ ತುಳಸೀದಾಸ ಕಾಮತ, ವಿನಾಯಕ ಕಾಮತ, ರವಿ ನಾಯಕ, ಶಿವಾನಂದ ನಾಯಕ ಹಾಗೂ ಸ್ಥಳೀಯ ಕೃಷಿಕರಾದ ಗೋಪಾಲ ಗೌಡ, ರಾಘವೇಂದ್ರ, ರಾಕು, ರಾಜೇಶ, ದೇವಿ, ಶೋಭಾ, ಗಾಂಧಾರಿ, ಮೀನಾಕ್ಷಿ, ರಾಧಾ, ಕಾಮಾಕ್ಷಿ ಇನ್ನಿತರರು ಪಾಲ್ಗೊಂಡಿದ್ದರು.