ಉತ್ತರ ಕನ್ನಡವೆಂದರೆ ಜಲಪಾತಗಳ ಜಿಲ್ಲೆ. ದಟ್ಟ ಕಾನನದ ಬೆಟ್ಟ ಗುಡ್ಡಗಳಲ್ಲಿ ಅವಿತಿರುವ ಅದೆಷ್ಟೋ ಜಲಪಾತಗಳು ಇಂದಿಗೂ ನಿಗೂಢವಾಗಿಯೇ ಉಳಿದಿವೆ. ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಅಂಕೋಲಾ ತಾಲೂಕಿನ ದೊಣ್ಣೆಮುಡಿ ಜಲಪಾತ ಪ್ರವಾಸಿಗರ ಗಮನ ಸೆಳೆಯುತ್ತಿದೆ…
ಇದು ಅಂಕೋಲಾ ತಾಲೂಕಿನ ತಳಗದ್ದೆ ಸಮೀಪದಲ್ಲಿರುವ ದೊಣ್ಣೆಮುಡಿ ಕಿರು ಜಲಪಾತ.. ಇತ್ತೀಚಿನ ವರ್ಷಗಳಲ್ಲಿ ಪ್ರಚಲಿತಕ್ಕೆ ಬಂದಿರುವ ಅಪರೂಪದ ದೊಣ್ಣೆ ಜಲಪಾತ, ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿ ಮುಂಗಾರು ಜೋರಾಗಿ ಅಬ್ಬರಿಸುತ್ತಿದೆ. ಹೀಗಾಗಿ ದೊಣ್ಣೆ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವುದರಿಂದ ಸಹಜವಾಗಿಯೇ ಜನರನ್ನು ಆಕರ್ಷಿಸುತ್ತಿದೆ
ಭಾನುವಾರ ಮತ್ತು ಇತರೆ ರಜಾ ದಿನಗಳಲ್ಲಿ ಇಲ್ಲಿಗೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ, ಜಲಪಾತದ ಸೋಜಿಗ ಕಣ್ತುಂಬಿಕೊಂಡು ಮೋಜಿನಲ್ಲಿ ತೊಡಗುತ್ತಾರೆ. ಬೆಟ್ಟದ ಮೇಲಿನಿಂದ ಹರಿದು ಬರುವ ನೀರು ಒಂದೆಡೆ ಸೇರಿ ದೊಣ್ಣೆ ಮುಡಿಯ ಮೇಲ್ಭಾಗದ ಕಲ್ಲಿನ ಮೂಲಕ ಹಲವು ಕವಲುಗಳಾಗಿ ಹರಿದು ಮತ್ತೆ ಕೆಳಭಾಗದಲ್ಲಿ ಒಂದಾಗಿ ಸುಮಾರು 20 ಅಡಿ ಮೇಲಿನಿಂದ ನೆಲಕ್ಕೆ ಧುಮ್ಮಿಕ್ಕುತ್ತದೆ
ಜಲಪಾತಗಳಲ್ಲಿ ರಭಸವಾಗಿ ಒಮ್ಮಿಂದೊಮ್ಮೆಲೆ ನೀರು ನುಗ್ಗಿ ಪ್ರಾಣಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಜಲಪಾತ ಅದಕ್ಕೆ ಹೊರತಾಗಿದೆ. ನೀರಿನ ಸೆಳೆತವು ಕಡಿಮೆ ಇದೆ. ಹಾಗಾಗಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಇಡೀ ಕುಟುಂಬದ ಜನರು ಜಲಪಾತದ ಅಡಿಯಲ್ಲಿ ಈಜಾಡಿ ಒಂದಿಷ್ಟು ಸಮಯವನ್ನು ಆನಂದದಿಂದ ಕಳೆಯಲು ಸುರಕ್ಷಿತ ಎನ್ನುವ ಭಾವನೆ ಜನರಲ್ಲಿದೆ. ಇದೇ ಕಾರಣಕ್ಕೆ ದೊಣ್ಣೆ ಜಲಪಾತಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರ್ತಾರೆ…
ಜಲಪಾತದ ಅಡಿಯಿಂದ ಮುಡಿಯವರೆಗೂ ಸುರಕ್ಷಿತವಾಗಿ ಸಾಗಲು ಮಾರ್ಗಗಳಿರುವುದು ಇಲ್ಲಿನ ವಿಶೇಷತೆ. ಜಲಪಾತದ ಮುಡಿಯಲ್ಲಿ ನಿಂತು ಸುತ್ತಮುತ್ತಲಿನ ಪರಿಸರದ ಸವಿಯನ್ನು ಸವಿಯುವುದೇ ರೋಮಾಂಚನಕಾರಿಯಾಗಿದೆ.ಇತ್ತೀಚಿನ ದಿನಗಳಲ್ಲಿ ಈ ಜಲಪಾತ ನೋಡಲು ಜನಸಾಗರವೇ ಹರಿದು ಬರುತ್ತಿದ್ದು, ಒಂದಿಷ್ಟು ಸುರಕ್ಷತೆಯ ಕ್ರಮಗಳು ಜರುಗಬೇಕಿದೆ. ಗ್ರಾಮ ಅರಣ್ಯ ಸಮಿತಿ ಅಥವಾ ಸ್ಥಳೀಯ ಆಡಳಿತ ಇಲ್ಲಿನ ನಿರ್ವಹಣೆ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಜಲಪಾತದ ಸುತ್ತಮುತ್ತಲು ಅರಣ್ಯ ಪ್ರದೇಶವಾಗಿದ್ದು ಜಲಪಾತದಿಂದ ಬಿದ್ದ ನೀರು, ಹಲವು ಕವಲುಗಳಾಗಿ ಹಂಚಿ ಹೋಗಿದೆ. ರಜಾ ದಿನದಲ್ಲಿ ಔತಣ ಮತ್ತು ಮೋಜಿನ ಕೂಟ ಹಮ್ಮಿಕೊಳ್ಳುವವರಿಗೆ ಇದು ಅತ್ಯಂತ ಸಮಂಜಸ ಪ್ರದೇಶದಂತೆ ಭಾಸವಾಗಿದೆ.ಮೋಜು ಮಸ್ತಿ ಮತ್ತು ಮದ್ಯದ ಕೂಟದ ಹಾವಳಿ ಹೆಚ್ಚಾಗಿ ಅದರಿಂದ ಅಪಾಯ ಸಂಭವಿಸದಂತೆ ನೋಡಿಕೊಳ್ಳಬೇಕಿದೆ.
ಅಂಕೋಲಾದಿಂದ ಕುಮಟಾ ಮಾರ್ಗವಾಗಿ ಸುಮಾರು 7 ಕಿಲೋಮೀಟರ್ ಸಾಗಿ ಎಡಭಾಗದ ತಳಗದ್ದೆ ಕ್ರಾಸ್ ತಲುಪಿ ಅಲ್ಲಿಂದ ಮುಂದೆ ಸಾಗಿ ಬಲ ಭಾಗಕ್ಕೆ ನೇರವಾಗಿ 8 ಕಿಲೋಮಿಟರ್ ಸಾಗಿದರೆ ಜಲಪಾತದ ದಾರಿ ಸಿಗುತ್ತದೆ. ಅಲ್ಲಿಂದ ವಾಹನ ಪಾರ್ಕ್ ಮಾಡಿ ಸುಮಾರು ಒಂದು ಕಿಲೋಮೀಟರ್ ಕಾಡ ದಾರಿಯಲ್ಲಿ ಸಾಗುತ್ತಿದ್ದಂತೆ ಜಲಪಾತ ಕಾಣುತ್ತದೆ. ಇತ್ತೀಚಿಗೆ ವಾಹನ ದಟ್ಟಣೆ ಹೆಚ್ಚಾಗಿದ್ದು ಪಾರ್ಕಿಂಗ್ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕಿದೆ.