ನಿರಂತರ ಓದು ಪರಿಣಾಮಕಾರಿ ಬೋಧನೆಗೆ ಸಹಕಾರಿ: ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಆಯ್. ನಾಯ್ಕ

ಸಿದ್ದಾಪುರ : ಶಿಕ್ಷಕ ವೃತ್ತಿಯಲ್ಲಿ ಶಿಕ್ಷಕರು ಕ್ರೀಯಾಶೀಲರಾಗಿ ಮತ್ತು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬೇಕು. ನಿರಂತರ ಓದು ಮತ್ತು ಸ್ವ ಅಧ್ಯಯನ ಶಿಕ್ಷಕರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯತ್ತದೆ. ಈ ದಿಶೆಯಲ್ಲಿ ಶಾಲಾ ಕರ್ತವ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್. ನಾಯ್ಕ ಬಾಲಿಕೊಪ್ಪ ಶಾಲೆಯಲ್ಲಿ ನಡೆದ ತಾಲೂಕಿನ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯ ಕುಮಾರ್ ಕೆ.ಎಂ ಇಂದಿನ ತರಬೇತಿಯ ಪೂರ್ಣ ಪ್ರಯೋಜನ ತರಗತಿ ಕೋಣೆಗಳಲ್ಲಿ ಆಗಬೇಕು. ತಾಲೂಕಿನ ಶೈಕ್ಷಣಿಕ ಪ್ರಗತಿಗೆ ನಿಮ್ಮ ಜೊತೆ ಇಲಾಖೆ ಸದಾ ಸಹಕಾರಿಯಾಗಿರುತ್ತದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಖಾಯಂ ಶಿಕ್ಷಕರ ಜೊತೆ ಅತಿಥಿ ಶಿಕ್ಷಕರ ಪಾತ್ರವೂ ಬಹಳ ಮುಖ್ಯ.ನಿಮ್ಮ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಸಂಘವು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದರು. ವೇದಿಕೆಯಲ್ಲಿ ಶಿಕ್ಷಕರ ಸಂಘದ ಕಾರ್ಯದರ್ಶಿ ಗುರುರಾಜ ನಾಯ್ಕ ಬಿ.ಆರ್.ಪಿ ಗಳಾದ ಕೃಷ್ಣಮೂರ್ತಿ, ಮಂಜುನಾಥ ಚಂದಾವರ ಬಾಲಿಕೊಪ್ಪ ಶಾಲೆಯ ಶಿಕ್ಷಕ ಅರ್ಜುನ ಚಹ್ಹಾಣ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಆರ್. ಪಿ ಗಳಾದ ಗಣೇಶ ಕೊಡಿಯ,ಚಂದ್ರೇಗೌಡ ಕಾರ್ಯನಿರ್ವಹಿಸಿದರು.