ಕೊಡಗು (ಜು.16): ಆತ ಸುರಸುಂದರಾಂಗ ಯುವಕ. ಆಕೆಯೂ ಸುಂದರಾಂಗಿಯೇ ಬಿಡಿ. ತನ್ನ ಸೌಂದರ್ಯ, ಮೈಮಾಟದಿಂದಲೇ ಆ ಸುರಸುಂದರಾಂಗನನ್ನು ಸೆಳೆದು ಲವ್ವಿಗೆ ಬೀಳಿಸಿದ್ಲು. ಒಂದಿನ ಅದೇನಾಯಿತೋ ಏನೋ ಗೊತ್ತಿಲ್ಲ. ಆಕೆಯ ಪ್ರೀತಿಯ ಪಾಶಕ್ಕೆ ಸಿಲುಕಿದವನು ಬೀದಿ ಹೆಣವಾಗಿ ಹೋಗಿದ್ದ. ಆತನ ಪ್ರಾಣ ಪಕ್ಷಿ ಹಾರಿ ಹೋದ ಮೇಲೆ ಆತನ ಜೇಬಿನಲ್ಲಿದ್ದ ಪತ್ರ ಸಾವಿನ ಸೀಕ್ರೇಟ್ ಹೇಳಿತ್ತು. ಆಗಲೇ ಗೊತ್ತಾಗಿತ್ತು ಆತ ಪ್ರೀತಿ ಮಾಡಿದ್ದು ಯುವತಿಯನ್ನಲ್ಲ 35 ರ ಆಂಟಿ, ಒಂದು ಮಗುವಿನ ತಾಯಿ ಎಂದು. ಹೀಗೆ 35 ರ ಆಂಟಿಯ ಸುಳ್ಳು ಪ್ರೀತಿಗೆ ಬಿದ್ದು 10 ಲಕ್ಷಕ್ಕೂ ಹೆಚ್ಚು ಹಣ, ಆಸ್ತಿ, ಚಿನ್ನಾಭರವಣನ್ನು ಕಳೆದುಕೊಂಡ ಯುವಕ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮದ ಸರೋಜ ಎಂಬುವರ ಮಗ ಅಜಿತ್ ಗಣಪತಿ.
ಸರೋಜ ಅವರ ಮುದ್ದಿನ ಕಿರಿಯ ಮಗ. ಗೋಣಿಕೊಪ್ಪಲಿನಲ್ಲಿ ಖಾಸಗಿ ಬಸ್ಸಿನ ಚಾಲಕನಾಗಿ ಕೆಲಸ ಮಾಡುತಿದ್ದ. ಗೋಣಿಕೊಪ್ಪಲಿನಿಂದ ಹುದಿಕೇರಿ, ಬಿರುನಾಣಿ ಮತ್ತು ಶ್ರಿಮಂಗಲ ಮಾರ್ಗದಲ್ಲಿ ನಾಲ್ಕು ವರ್ಷಗಳಿಂದ ಬಸ್ಸು ಓಡಿಸುತ್ತಿದ್ದ ಅಜಿತ್ ಗಣಪತಿ ಇದ್ದಕ್ಕಿದ್ದಂತೆ ಜುಲೈ 2 ರಂದು ರಾತ್ರಿ ಗೋಣಿಕೊಪ್ಪದ ಮಾರುಕಟ್ಟೆ ಬಳಿ ವಿಷ ಸೇವಿಸಿ ಪ್ರಾಣ ಬಿಡುವುದಕ್ಕೆ ಒದ್ದಾಡುತ್ತಿದ್ದ. ಅಜಿತ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದ ತನ್ನ ಸಹೋದರ ಭರತ್ ಸೋಮಯ್ಯನಿಗೆ ನನ್ನನ್ನು ಬದುಕಿಸಬೇಡಿ. ಬದುಕಿಸಿದರೂ ನಾಳೆ ಕಿರಣ್ ಗೌಡ ನನ್ನನ್ನು ಕೊಚ್ಚಿಕೊಲೆ ಮಾಡುತ್ತಾನೆ ಎಂದು ಸಾವಿನ ದವಡೆಯಲ್ಲೂ ಭಯ ಬೀಳುತ್ತಿದ್ದನಂತೆ.
ಅಜಿತ್ ನನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ದಿದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಪ್ರಾಣಬಿಟ್ಟಿದ್ದಾನೆ. ಅಜಿತ್ ಗಣಪತಿ ಹೀಗೆ ಇದ್ದಕ್ಕಿದ್ದಂತೆ ವಿಷ ಸೇವಿಸಿ ಸಾಯುವಂತಹದ್ದು ಏನಾಗಿತ್ತು ಎಂದು ಎಲ್ಲರೂ ದಿಗ್ಭ್ರಾಂತರಾಗಿ ಚಿಂತಿಸುತ್ತಿರುವಾಗಲೇ, ಅಜಿತ್ ಬರೆದು ತನ್ನ ಜೇಬಿನಲ್ಲಿಟ್ಟಿಕೊಂಡಿದ್ದ ಡೆತ್ ನೋಟ್ ಎಲ್ಲರ ಪ್ರಶ್ನೆಗಳಿಗೆ ಸುರುಳಿ ಸುರುಳಿಯಾಗಿ ಬಿಚ್ಚುತ್ತಾ ಉತ್ತರ ಹೇಳಿತ್ತು. ಆಗಲೇ ನೋಡಿ ಅಜಿತ್ ಗಣಪತಿ ತಾನು ಇನ್ನೇನು ಸಾಯುತ್ತೇನೆ ಎಂದು ಗೊತ್ತಿದ್ದರೂ ಕಿರಣ್ ಗೌಡ ನನ್ನನ್ನು ಕೊಲ್ಲುತ್ತಾನೆ ಎಂದು ಭಯಪಡುತ್ತ ಪರದಾಡುತ್ತಿದ್ದರ ಹಿಂದಿನ ಸತ್ಯ ಬಯಲಾಗಿತ್ತು. ಅಷ್ಟೇ ಅಲ್ಲ ಅಜಿತ್ ಗಣಪತಿ ತಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದ ಎನ್ನುವುದು ಕೂಡ ಬೆಳಕಿಗೆ ಬಂದಿತ್ತು.
ಗೋಣಿಕೊಪ್ಪಲಿನಿಂದ ಹುದಿಕೇರಿ, ಬಿರುನಾಣಿ ಮತ್ತು ಶ್ರಿಮಂಗಲ ಮಾರ್ಗದಲ್ಲಿ ನಾಲ್ಕು ವರ್ಷಗಳಿಂದ ಬಸ್ಸು ಓಡಿಸುತ್ತಿದ್ದ. ಈ ಮಾರ್ಗದಲ್ಲಿ ಬಸ್ಸು ಓಡಿಸುತ್ತಿರುವಾಗಲೇ ಪರಿಚಯವಾದವಳೇ ಬಿರುನಾಣಿ ಸಮೀಪದ ಪೂಕೊಳ ಗ್ರಾಮದ ಬಿನ್ಯ ಬೋಜಮ್ಮ. ಆ ಪರಿಚಯ ಪ್ರೀತಿಗೆ ತಿರುಗಿದೆ. ಯುವಕ ನನ್ನದೆಲ್ಲವೂ ನಿನ್ನದೆ, ನನ್ನ ಸರ್ವಸ್ವವೂ ನಿನ್ನದೆ ಎಂದು ಸರ್ವಸ್ವವನ್ನೂ ಆಕೆಗೆ ಧಾರೆ ಎರೆದಿದ್ದನಂತೆ. ತಾನು ದುಡಿದಿದ್ದನ್ನೆಲ್ಲಾ ಆಕೆಗೆ ಕೊಡಲಾರಂಭಿಸಿದ್ದನಂತೆ. ಮನೆಗೆ ಬಂದರೂ ಯಾರೊಂದಿಗೂ ಬೆರೆಯದ ಅಜಿತ್ ಗಣಪತಿ, ತಾನು ದುಡಿದರೂ ನಯಾಪೈಸೆಯನ್ನು ಮನೆಗೆ ಕೊಡುತ್ತಿರಲಿಲ್ಲವಂತೆ.
ತನ್ನ ದುಡಿಮೆಯ ಹಣ ಸಾಕಾಗದೆ ಮನೆಯಲ್ಲಿದ್ದ ಚಿನ್ನ, ಆಸ್ತಿ ಪತ್ರಗಳನ್ನು ಗಿರಿವಿಟ್ಟು ಆಕೆಗೆ ಹಣ ನೀಡುತ್ತಿದ್ದನಂತೆ. ಇದನ್ನು ಅಜಿತ್ ಸಹೋದರನೇ ಹೇಳುತ್ತಾರೆ. ಅಜಿತ್ ಗಣಪತಿ ಬೆಂಗಳೂರಿನಲ್ಲಿದ್ದಾಗ ಖರೀದಿಸಿದ್ದ ಕಾರನ್ನು ಇತ್ತೀಚೆಗೆ ಮಾರಾಟ ಮಾಡಿದ್ದನಂತೆ. ಆ ಹಣವನ್ನು ಏನು ಮಾಡಿದ ಎನ್ನುವುದೇ ಗೊತ್ತಾಗಲಿಲ್ಲ. ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಒಡವೆಗಳನ್ನು ಕೊಂಡೊಯ್ದು ಗಿರಿವಿ ಅಂಗಡಿಗಳಿಗೆ ಇಟ್ಟಿದ್ದನಂತೆ. ಸ್ನೇಹಿತರು ಸಂಬಂಧಿಕರ ಬಳಿಯಲೆಲ್ಲಾ 50 ಸಾವಿರ, ಲಕ್ಷ ಅಂತ ಸಾಲ ಮಾಡಿದ್ದನಂತೆ. ಇದೆಲ್ಲವೂ ಅವನು ಸತ್ತ ಮೇಲೆ ಗೊತ್ತಾಗುತ್ತಿದೆ. ತನ್ನ ಬಳಿ ಇದ್ದ ಸ್ಮಾರ್ಟ್ ಫೋನನ್ನು ಬಿಡದೆ ಮಾರಾಟ ಮಾಡಿದ್ದಾನೆ. ಕೊನೆಗೆ ತನ್ನ ತಾಯಿಯ ಬಳಿ ಇದ್ದ ಕೀ ಪ್ಯಾಡ್ ಫೋನನ್ನು ಬಳಸುವ ಹಂತಕ್ಕೆ ಎಲ್ಲವನ್ನು ಕಳೆದುಕೊಂಡಿದ್ದಾನೆ.
ಎಲ್ಲವನ್ನು ಅವನು ಪ್ರೀತಿಸಿದವಳಿಗಾಗಿ ಸುರಿದು ನಮ್ಮನ್ನು ಬೀದಿಗೆ ನಿಲ್ಲಿಸಿ ಹೋಗಿದ್ದಾನೆ. ನಮಗೆ ಮೋಸವಾಗಿದೆ, ನ್ಯಾಯಬೇಕು. ಇಲ್ಲದಿದ್ದರೆ ನಮಗೂ ಆತ್ಮಹತ್ಯೆಯೇ ಗತಿ ಎಂದು ಹೆತ್ತ ಕರಳು ಸರೋಜ ಅವರು ಎದೆಯುದ್ದಕ್ಕೆ ಬೆಳೆದಿದ್ದ ಮಗನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಅಜಿತ್ ಗಣಪತಿ ಬರೆದಿದ್ದ ಡೆತ್ ನೋಟ್ ಮತ್ತು ಗಣಪತಿ ಅವರ ಕುಟುಂಬದವರು ನೀಡಿದ ದೂರನ್ನು ಆಧರಿಸಿ ಗೋಣಿಕೊಪ್ಪ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಮಹಿಳೆ ಬಿನ್ಯ ಬೋಜಮ್ಮ ಮತ್ತು ಕಿರನ್ ಗೌಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ನಿಜವಾಗಿಯೂ ಅಜಿತ್ ಗಣಪತಿಗೆ ಯಾರಿಂದ ಮೋಸ ಆಗಿದೆ ಎನ್ನುವ ಸತ್ಯ ಹೊರ ಬರಬೇಕಾಗಿದೆ.