ಹೀರೆಕೋಡಿ ಜೈನಮುನಿ ಹತ್ಯೆ ಪ್ರಕರಣ – ಸ್ವಾಮೀಜಿಯ ಡೈರಿ ರಹಸ್ಯ ಕೆದಕುತ್ತಿರುವ ಪೊಲೀಸರು

ಚಿಕ್ಕೋಡಿ: ಹೀರೆಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ಮಹಾರಾಜರ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಸ್ವಾಮೀಜಿಯ ಡೈರಿ ರಹಸ್ಯವನ್ನು ಕೆದಕುತ್ತಿದ್ದಾರೆ.

ಜೈನಮುನಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ನಾರಾಯಣ ಮಾಳಿ ಮತ್ತು ಎ2 ಆರೋಪಿ ಹಸನ್ ದಲಾಯತ್‌ನನ್ನು ಜುಲೈ 17ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಹಿನ್ನೆಲೆ ಡಿವೈಎಸ್ಪಿ ಬಸವರಾಜ್ ಯಲಿಗಾರ ಅವರ ನೇತೃತ್ವದಲ್ಲಿ ಆರೋಪಿಗಳ ತೀವ್ರ ವಿಚಾರಣೆಯನ್ನು ನಡೆಸುತ್ತಿದ್ದು, ಈಗಾಗಲೇ ಚಿಕ್ಕೋಡಿ ಪೊಲೀಸರು ಹಲವು ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಸಂಗ್ರಹಿಸಿದ್ದಾರೆ.

ಆರೋಪಿಗಳು ಸ್ವಾಮೀಜಿಯ ಹತ್ಯೆ ಮಾಡಿದ್ದಲ್ಲದೇ ಅವರ ಡೈರಿಯನ್ನೂ ಸುಟ್ಟು ಹಾಕಿದ್ದರು. ಈ ಕುರಿತು ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ಜೈನಮುನಿಯ ಪರ್ಸನಲ್ ಡೈರಿಯನ್ನು ಸುಟ್ಟು ಹಾಕಿದ ಸ್ಥಳವನ್ನು ತೋರಿಸಿದ್ದಾರೆ. ಈ ಹಿನ್ನೆಲೆ ಸುಟ್ಟ ಡೈರಿಯ ಬೂದಿಯನ್ನು ಎಫ್‌ಎಸ್‌ಎಲ್‌ಗೆ (FSL) ರವಾನಿಸಲು ಸಿದ್ಧತೆ ಮಾಡಲಾಗಿದೆ. ಬೆಂಗಳೂರಿನ (Bengaluru) ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಡೈರಿಯ ಬೂದಿಯನ್ನು ರವಾನಿಸಲು ಸಿದ್ಧತೆ ನಡೆಸಿದ್ದು, ಅದರೊಂದಿಗೆ ನಾಲ್ಕು ಮೊಬೈಲ್ ಫೋನ್‌ಗಳನ್ನು ಸಹಾ ಪ್ರಯೋಗಾಲಯಕ್ಕೆ ರವಾನೆ ಮಾಡಲು ನಿರ್ಧರಿಸಿದ್ದಾರೆ.

ಜೈನಮುನಿಗಳು ಬಳಸುತ್ತಿದ್ದ ಎರಡು ಮೊಬೈಲ್ ಹಾಗೂ ಇಬ್ಬರು ಆರೋಪಿಗಳ ತಲಾ ಒಂದೊಂದು ಮೊಬೈಲ್ ಅನ್ನು ಎಫ್‌ಎಸ್‌ಎಲ್‌ಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ಮೊಬೈಲ್‌ನಲ್ಲಿ ಏನಾದರೂ ಸಾಕ್ಷ್ಯ ಇದೆಯಾ? ಯಾವಾಗೆಲ್ಲಾ ಕರೆ ಮಾಡಿದ್ದರು ಎಂಬ ಬಗ್ಗೆ ಪೊಲೀಸರು ಪಿನ್ ಟು ಪಿನ್ ಮಾಹಿತಿ ಪಡೆಯುತ್ತಿದ್ದಾರೆ. ಹಣಕಾಸಿನ ವ್ಯವಹಾರ, ಸಾಮಾಜಿಕ ಜಾಲತಾಣ ಬಳಕೆ ಹಾಗೂ ಕಾಲ್ ರೆಕಾರ್ಡ್, ಪೋಟೋ ಮತ್ತು ವಿಡಿಯೋ ಪತ್ತೆಗಾಗಿ ಮೊಬೈಲ್‌ಗಳನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ಆರೋಪಿಗಳನ್ನು ಕಸ್ಟಡಿಗೆ ಪಡೆದು ಇಂದಿಗೆ (ಗುರುವಾರ) ಮೂರು ದಿನಗಳಾಗಿದ್ದು, ಮೂರನೇ ದಿನವೂ ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ. ಬುಧವಾರ ಆರೋಪಿಗಳನ್ನು ಕರೆದೊಯ್ದು ಪೊಲೀಸರು ಸ್ಥಳ ಮಹಜರು ಮಾಡಿದ್ದರು. ಅಲ್ಲದೇ ಇಡೀ ದಿನ ಘಟನೆ ನಡೆದ ಸ್ಥಳ, ಮೃತದೇಹ ರವಾನಿಸಿದ ಮಾರ್ಗ ಜೈನಮುನಿಗಳ ದೇಹ ತುಂಡರಿಸಿದ ಸ್ಥಳ, ಕಟಕಬಾವಿಯ ಕೊಳವೆಬಾವಿ ಇದ್ದ ಗದ್ದೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸುಟ್ಟು ಹಾಕಿದ ಡೈರಿಯಲ್ಲಿ ಏನಿತ್ತು ಎಂಬ ಬಗ್ಗೆ ಎ1 ಆರೋಪಿ ನಾರಾಯಣ್ ಇಲ್ಲಿಯವರೆಗೂ ಬಾಯ್ಬಿಟ್ಟಿಲ್ಲ. ಈ ಹಿನ್ನೆಲೆ ಹಿರೇಕೋಡಿ ಆಶ್ರಮದಿಂದ ಕಟಕಬಾವಿಯ ಕೊಳವೆಬಾವಿ ಇದ್ದ ಗದ್ದೆಯವರೆಗೂ ಹೋಗಿದ್ದ ಮಾರ್ಗವನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 35 ಕಿಲೋಮೀಟರ್ ರಸ್ತೆ ಮಾರ್ಗದಲ್ಲಿ ಇರುವ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದು, ಹಂತಕರು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದ್ದಾರಾ ಎಂಬ ಬಗ್ಗೆ ಪೊಲೀಸರು ಸಾಕ್ಷ್ಯ ಕಲೆ ಹಾಕುತ್ತಿದ್ದಾರೆ.