ಅಂಕೋಲಾ: ಹಳಿಯಾಳದಲ್ಲಿ ಗುರುವಾರ ಕಕ್ಷಿದಾರರೊಬ್ಬರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಮ್ ವಿ ಅಷ್ಟೇಕರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಂಕೋಲಾ ತಾಲೂಕಿನ ವಕೀಲರ ಸಂಘದ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಾರ್ವಜನಿಕ ಸೇವೆಗೆ ವಕೀಲರು ಬದ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ ಅವರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ವಕೀಲರಿಗೆ ರಕ್ಷಣೆ ಇಲ್ಲದಂತಾಗಿದ್ದು ಶೀಘ್ರದಲ್ಲಿಯೇ ವಕೀಲರ ಸಂರಕ್ಷಣಾ ಅಧಿನಿಯಮ ಕಾಯ್ದೆ ಜಾರಿಗೆ ತರಬೇಕು ಹಾಗೂ ಹಳಿಯಾಳದಲ್ಲಿ ವಕೀಲರ ಮೇಲೆ ಹಲ್ಲೆ ಮಾಡಿದವರಿಗೆ ಸೂಕ್ತ ಶಿಕ್ಷೆ ವಿಧಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಂಕೋಲಾ ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ಉಪಾಧ್ಯಕ್ಷ ನಿತ್ಯಾನಂದ ಕವರಿ, ಖಜಾಂಚಿ ಆರ್ ಟಿ ಗೌಡ, ಸಹ ಕಾರ್ಯದರ್ಶಿ ಮಮತಾ ಕೆರೆಮನೆ, ವಕೀಲರಾದ ಉಮೇಶ ನಾಯ್ಕ, ನಾಗಾನಂದ ಬಂಟ, ಬಿ.ಡಿ ನಾಯ್ಕ, ಪ್ರತಿಭಾ ನಾಯ್ಕ ಮತ್ತಿತರು ಇದ್ದರು