ಹಳಿಯಾಳದಲ್ಲಿ ವಕೀಲರ ಸಂಘದ ಅಧ್ಯಕ್ಷರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದಾಂಡೇಲಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ

ದಾಂಡೇಲಿ : ಹಳಿಯಾಳ ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಮಲ್ಲಿಕಾರ್ಜುನ್.ವಿ.ಅಷ್ಟೇಕರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ತಾಲ್ಲೂಕಿನ ವಕೀಲರ ಸಂಘದ ಆಶ್ರಯದಡಿ ಶುಕ್ರವಾರ ಪ್ರತಿಭಟನೆಯನ್ನು ನಡೆಸಲಾಯ್ತು.

ನಗರದ ಸಿವಿಲ್ ನ್ಯಾಯಾಲಯದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಸಂಪನ್ನಗೊಂಡು, ಆನಂತರ ರಾಜ್ಯಪಾಲರಿಗೆ ಬರೆದ ಲಿಖಿತ ಮನವಿಯನ್ನು ತಹಶೀಲ್ದಾರರ ಮೂಲಕ ನೀಡಲಾಯ್ತು. ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ವಕೀಲ ಮಲ್ಲಿಕಾರ್ಜುನ್ ಅಷ್ಟೇಕರ್ ಅವರ ಮನೆಗೆ ಅಕ್ರಮವಾಗಿ ನುಗ್ಗಿ ಚಾಕುವಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿರುವುದು ಅತ್ಯಂತ ಖಂಡನೀಯ. ನ್ಯಾಯ ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ವಕೀಲರುಗಳ ಮೇಲೆ ಈ ರೀತಿ ಹಲ್ಲೆಗಳು ನಡೆಯದಂತೆ ಸೂಕ್ತ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳಬೇಕು. ಮಲ್ಲಿಕಾರ್ಜುನ್ ಅಷ್ಟೇಕರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಈ ನಿಟ್ಟಿನಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಸ್.ಕುಲಕರ್ಣಿ, ಉಪಾಧ್ಯಕ್ಷೆ ರೇಷ್ಮಾ ಬಾವಾಜಿ, ಸಹ ಕಾರ್ಯದರ್ಶಿ ರಾಘವೇಂದ್ರ ಗಡೆಪ್ಪನವರ, ವಕೀಲರುಗಳಾದ ವಿ.ಆರ್.ಹೆಗಡೆ, ಎಂ.ಸಿ.ಹೆಗಡೆ, ಎನ್.ಕೆ.ಮಹೇಶ್ವರಿ, ರಾಜಶೇಖರ್.ಐ.ಎಚ್, ವಿಶ್ವನಾಥ್ ಜಾಧವ್, ಫೀರ್ ಸಾಬ್ ನದಾಫ್, ವಿಶ್ವನಾಥ್ ಲಕ್ಷ್ಯಟ್ಟಿ, ರಾಹುಲ್ ಬಾವಾಜಿ, ಮುಸ್ತಾಕ್ ಶೇಖ, ಎಸ್.ಬಿ.ಶಾಲೆ, ಮಂಜುನಾಥ್ ಬಂಡಿವಡ್ಡರ್, ಅನಿತಾ ಸೋಮಕುಮಾರ್, ಶೈಲಾ ನಾಮಧಾರಿ, ಸುಮಿತ್ರಾ.ಕೆ, ರೂಪಾ ಕೇರವಾಡ್ಕರ್, ಕವಿತಾ ಗಡೆಪ್ಪನವರ್, ರತ್ನಾದೀಪ.ಎನ್.ಎಂ, ಆಫ್ರಿನ್ ಕಿತ್ತೂರು, ಕೋಮಲ್ ಶಿಂಧೆ ಮೊದಲಾದವರು ಉಪಸ್ಥಿತರಿದ್ದರು.