ಉಡುಪಿ (ಜು.14): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸಂಜೆ ಉಡುಪಿಗೆ ಆಗಮಿಸಿದ್ದು, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಉಡುಪಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಉಡುಪಿ ಭೇಟಿಯ ವೇಳೆ ಖಾಸಗಿ ಹೋಟೆಲ್ ನಲ್ಲಿ ಪ್ರಬುದ್ಧ ಸಭೆ ನಡೆಯಿತು. ಈ ಸಭೆಯಲ್ಲಿ ಲೆಕ್ಕಪರಿಶೋಧಕರು, ಆರ್ಥಿಕ ತಜ್ಞರು, ವಿವಿಧ ಸಂಘಟನೆಗಳ ಪ್ರಮುಖರು ಭಾಗಿಯಾದರು.
ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆ ಕುರಿತು ಉಪನ್ಯಾಸ ನೀಡಿದ ಸಚಿವೆ, ಬಡ ಮಧ್ಯಮ ವರ್ಗ ಹಾಗೂ ಕೈಗಾರಿಕೆ ಉತ್ತೇಜನಗಳಿಗೆ ಬಜೆಟ್ ನ ಸ್ಪಂದನೆ ಕುರಿತು ಮಾತುಕತೆ ನಡೆಸಿದರು.ಎಂ ಎಸ್ ಎಮ್ ಇ ಬಗ್ಗೆ ಕೇಂದ್ರ ಸರಕಾರ ವಿಶೇಷ ಮುತುವರ್ಜಿ ವಹಿಸಿದೆ.ಬಡ ಮತ್ತು ಮಧ್ಯಮ ವರ್ಗಕ್ಕೆ ಈ ಯೋಜನೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಆರಂಭಿಸಲಾದ ಉದ್ಯಂ ಪೋರ್ಟಲ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಎಂ ಎಸ್ ಎಮ್ ಇ ಮೂಲಕ ತಯಾರಾದ ವಸ್ತುಗಳ ರಫ್ತಿಗೆ ಆದ್ಯತೆ ನೀಡಿದ್ದೇವೆ ಎಂದರು.
ಎಂ ಎಸ್ ಎಂ ಇ ಮೂಲಕ 126 ಪೇಟೆಂಟ್ ನೀಡಲಾಗಿದೆ. ಪ್ರತಿ ಬಾರಿ ಪ್ರಧಾನಿ ಮೋದಿಯವರು ಎಂಎಸ್ಎಂಇ ಬಗ್ಗೆ ಒತ್ತುಕೊಟ್ಟು ಮಾತನಾಡುತ್ತಾರೆ. ಎಂ ಎಸ್ ಎಂ ಈ ಭಾರತ ದೇಶದ ಬೆನ್ನೆಲುಬು.ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಣ್ಣ ವ್ಯಾಪಾರಕ್ಕೆ ಭದ್ರತೆ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ಆದಾಯ ತೆರಿಗೆ ವಿಚಾರದಲ್ಲಿ ಅನೇಕ ಸುಧಾರಣೆ ತಂದಿದ್ದೇವೆ.7 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಮಿತಿಯನ್ನು 7,27,000 ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲವಾಗಲಿದೆ. ಜೀವ ಉಳಿಸುವ ಔಷಧಗಳು ಮತ್ತು ಕ್ಯಾನ್ಸರ್ ಮೆಡಿಸಿನ್ ಗಳಿಗೂ ವಿನಾಯಿತಿಯ ಲಾಭ ದೊರಕಲಿದೆ ಎಂದರು.
ಇಸ್ರೋದಲ್ಲಿ ಯು ಆರ್ ರಾವ್ ಕೊಡುಗೆ ಅನನ್ಯ:
ಇಂದು ಉಡ್ಡಯನಗೊಂಡಿರುವ ಚಂದ್ರಯಾನ ಯಶಸ್ವಿಯಾಗಲಿ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಶುಭ ಹಾರೈಸಿದರು. ನಾವೆಲ್ಲರೂ ಒಂದಾಗಿ ಚಂದ್ರಯಾನದ ಯಶಸ್ಸಿಗೆ ಹಾರೈಸೋಣ. ಅಂತರಿಕ್ಷ ಸಾಧನೆಗಳಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಿದೆ. ಇವರಿಗೆ ಅನೇಕ ಯಶಸ್ವಿ ಉಡ್ಡಯನಗಳನ್ನು ಮಾಡಿದ್ದೇವೆ. ಜನರ ಶುಭ ಹಾರೈಕೆಯಿಂದ ಇಸ್ರೋ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ತೊಡಿಸಲಿದೆ ಎಂದರು.
ಇಸ್ರೋ ನಿರ್ವಹಣೆಯಲ್ಲಿ ಪ್ರಮುಖರಾದ ಯುಆರ್ ರಾವ್ ಕರ್ನಾಟಕದ ಉಡುಪಿಯವರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಕರ್ನಾಟಕ ಕರಾವಳಿಯ ಕೊಡುಗೆ ದೊಡ್ಡದು. ಯು ಆರ್ ರಾವ್ ರಂತಹ ಶ್ರೇಷ್ಠ ವಿಜ್ಞಾನಿಗಳಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಹಂತ ತಲುಪಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಗುರುವಾರ ರಾತ್ರಿ ಉಡುಪಿಗೆ ಬಂದು ತಂಗಿದ್ದ ನಿರ್ಮಲಾ ಸೀತಾರಾಮನ್, ಶುಕ್ರವಾರ ಮುಂಜಾನೆ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಕೃಷ್ಣ ದರ್ಶನದ ಬಳಿಕ ಪರ್ಯಾಯ ಮಠಾಧೀಶರಿಂದ ಗೌರವ ಸ್ವೀಕರಿಸಿದರು. ಆ ಬಳಿಕ ಅದಮಾರು ಮಠಕ್ಕೆ ತೆರಳಿ, ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಜೊತೆಗೆ ಸಮಾಲೋಚನೆ ನಡೆಸಿದರು. ಅದೇ ಮಾರು ಮಠದ ವತಿಯಿಂದಲೂ ಸಚಿವೆಯನ್ನು ಗೌರವಿಸಲಾಯಿತು.