ನೇಣಿಗೆ ಶರಣಾದ ಗೃಹಿಣಿ; ಕೊಲೆ ಶಂಕೆ ವ್ಯಕ್ತಪಡಿಸಿ ಪತಿ ಮನೆ ಮುಂದೆ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ!

ಬಳ್ಳಾರಿ: ರಸ್ತೆಗೆ ಅಡ್ಡಲಾಗಿ ಬಂಡಿ ನಿಲ್ಲಿಸಿ ಬಸ್ ತಡೆದಿರುವ ಗ್ರಾಮಸ್ಥರು. ಪತಿಯ ಮನೆ ಮುಂದೆ ಮುಂಜಾನೆಯಿಂದಲೇ ಪ್ರತಿಭಟನೆಗೆ ಕುಳಿತಿರುವ ನೂರಾರು ಮಹಿಳೆಯರು. ಗೃಹಿಣಿಯದ್ದು ಸೊಸೈಡ್ ಅಲ್ಲವೆಂದು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿರುವ ಊರ ಜನರು. ಹೌದು ಇದು ಗೃಹಿಣಿಯೊಬ್ಬಳು ಅನುಮಾನಸ್ಪದವಾಗಿ ಸಾವನಪ್ಪಿದಕ್ಕೆ ಬಳ್ಳಾರಿ ಜಿಲ್ಲೆಯ ಬಾದನಹಟ್ಟಿ ಗ್ರಾಮದಲ್ಲಿ ನಡೆದ ಗಲಾಟೆ. ಬಳ್ಳಾರಿ ಮೂಲದ ಅಂಜಲಿಯನ್ನ ಕಳೆದ 12 ವರ್ಷಗಳ ಹಿಂದೆ ಬಾದನಹಟ್ಟಿ ಗ್ರಾಮದ ಕಿರಾಣಿ ವ್ಯಾಪಾರಿ ಗಂಗಾಧರಗೆ ಕೊಟ್ಟು ಮದುವೆ ಮಾಡಲಾಗಿತ್ತು. ಗಂಗಾಧರ ಹಾಗೂ ಅಂಜಲಿ ದಂಪತಿಗಳಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ‌ಆದ್ರೆ, ಅಂಜಲಿ ನಿನ್ನೆ(ಜು.11) ಏಕಾಎಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳೆಂದು ಗಂಗಾಧರ ಪೊಲೀಸರಿಗೆ ಮಾಹಿತಿ ನೀಡಿದ್ದ.

ಹೊಟ್ಟೆ ನೋವು ತಾಳದೇ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವುದು ಪತಿ ಗಂಗಾಧರ ಹಾಗೂ ಅಂಜಲಿ ಪೋಷಕರ ವಾಗಿದೆ. ಆದ್ರೆ, ಮುಂಜಾನೆ ಊರಮ್ಮನ ಪೂಜೆಯಲ್ಲಿ ಭಾಗಿಯಾಗಿದ್ದ ಅಂಜಲಿ ಸಂಜೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅಂಜಲಿಯನ್ನ ಕೊಲೆ‌ ಮಾಡಿ ನೇಣು ಬಿಗಿದು ಹಾಕಲಾಗಿದೆ. ಸೂಸೈಡ್ ಮಾಡಿಕೊಳ್ಳುವವರು ಕಿಟಕಿಗೆ ಹಗ್ಗ ಹಾಕಿ ಸೂಸೈಡ್ ಮಾಡಿಕೊಳ್ಳಲ್ಲ. ಇದೊಂದು ವ್ಯವಸ್ಥಿತವಾಗಿ ನಡೆದ ಕೊಲೆ ಅನ್ನೋದು ಗ್ರಾಮಸ್ಥರ ವಾದ.

ಅಂಜಲಿ ಪತಿ ಇನ್ನೊಂದು ಮದುವೆಯಾಗಲು ಈ ರೀತಿ ಕಟ್ಟುಕತೆ ಕಟ್ಟಿದ್ದಾನೆಂದು ಗ್ರಾಮದ ಮಹಿಳೆಯರ ಆಕ್ರೋಶ

ಅಂಜಲಿ ಸಾವಿಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಲು ಕಾರಣವಿದೆ. ಅಂಜಲಿ ಪತಿ ಗಂಗಾಧರ ಮತ್ತೊಂದು ಮದುವೆಯಾಗಲು ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ಅಂಜಲಿ ಗ್ರಾಮದಲ್ಲಿನ ಯಾರಾದ್ರು, ಮನೆಯಲ್ಲಿ ಊಟ ಮಾಡಿ ಜೀವನ ಸಾಗಿಸುತ್ತಿದ್ದಳಂತೆ. ಆದ್ರೆ, ಸೋಮವಾರ ಸಂಜೆ ಗ್ರಾಮಸ್ಥರು ಊರಮ್ಮನ ಪೂಜೆಯಲ್ಲಿ ಭಾಗಿಯಾದ ವೇಳೆ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಗಂಗಾಧರ ಕಟ್ಟುಕಥೆ ಕಟ್ಟಿದ್ದಾನೆ. ಹೀಗಾಗಿ ಅಂಜಲಿಯದ್ದು ಆತ್ಮಹತ್ಯೆಯಲ್ಲ ಮರ್ಡರ್ ಅನ್ನೋದು ಗ್ರಾಮಸ್ಥರ ವಾದ.

ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು

ಅಂಜಲಿ ಸಾವಿನ ಬಗ್ಗೆ ಸರಿಯಾದ ತನಿಖೆಯಾಗಬೇಕು. ಅಂಜಲಿ‌ ಸಾವಿಗೆ ಕಾರಣರಾದ ಪತಿ ಗಂಗಾಧರ ಹಾಗೂ ಅವರ ಕುಟುಂಬಸ್ಥರನ್ನ ಬಂಧಿಸಬೇಕೆಂದು ಬಾದನಹಟ್ಟಿ ಗ್ರಾಮಸ್ಥರು ಈಡೀ ದಿನ‌ ಗದ್ದಲ ಗಲಾಟೆ ಮಾಡಿದ್ರು. ಗ್ರಾಮದಲ್ಲಿ ಸಂಚರಿಸುವ ವಾಹನಗಳನ್ನ ತಡೆದು ಪ್ರತಿಭಟನೆ ನಡೆಸಿದರು. ಪತಿ ಗಂಗಾಧರ ಮನೆ ಮುಂದೆ ಇಡೀ ದಿನ ಧರಣಿ ನಡೆಸಿ ಸರಿಯಾಗಿ ತನಿಖೆ ಮಾಡಬೇಕೆಂದು ಆಗ್ರಹಿಸಿದರು. ಅಲ್ಲದೇ ಪೊಲೀಸರ ಜೊತೆಗೂ ವಾಗ್ದಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಆತ್ಮಹತ್ಯೆಯೆಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಅಂಜಲಿ ಸಾವು ಆತ್ಮಹತ್ಯೆಯೆಂದು ಪತಿ ಹಾಗೂ ಅಂಜಲಿ ಪೋಷಕರು ನೀಡಿದ ದೂರಿನಂತೆ ಕುರಗೋಡಗ ಠಾಣೆಯ ಪೊಲೀಸರು ದಾಖಲಿಸಿಕೊಂಡಿದ್ದಾರೆ.‌ ಆದ್ರೆ, ಗ್ರಾಮಸ್ಥರು ಮಾತ್ರ ಅಂಜಲಿಯದ್ದು ಆತ್ಮಹತ್ಯೆ ಅಲ್ಲ ಕೊಲೆ. ಹೀಗಾಗಿ ಸ್ವಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಬೇಕು ಅನ್ನೋದು ಗ್ರಾಮಸ್ಥರ ವಾದ. ಹೀಗಾಗೇ ಈಡೀ ದಿನ ಕೊಲೆ ಎಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಪ್ರಕಾರ ಪೊಲೀಸರು ಗ್ರಾಮಸ್ಥರಿಂದಲೂ ದೂರು ಪಡೆದು ತನಿಖೆಯ ಭರವಸೆ‌ ನೀಡಿದ್ದಾರೆ. ಆದ್ರೆ, ಅಂಜಲಿಯದ್ದು ಆತ್ಮಹತ್ಯೆಯೋ? ಮತ್ತೊಂದು ಮದುವೆಯಾಗಲು ಪತಿಯೇ ಕೊಲೆ ಮಾಡ್ನಿದೋ ಅನ್ನೋದು ಪೊಲೀಸರ ತನಿಖೆಯಿಂದಲೇ ಬೆಳಕಿಗೆ ಬರಬೇಕಿದೆ.