ದಾವಣಗೆರೆ: ವ್ಯಕ್ತಿಯೊಬ್ಬ ಹಣ ಡೆಪಾಸಿಟ್ ಮಿಷನ್ ನಿಂದ ನಗದು ದೋಚಿದ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಪಿ.ಬಿ.ರೋಡ್ ರಿಲಯನ್ಸ್ ಮಾರ್ಟ್ ಎದುರಿಗಿರುವ ಐಸಿಐಸಿಐ ಬ್ಯಾಂಕ್‍ಗೆ ವಿಜಯ್ ಎಂಬವರು 52 ಸಾವಿರ ಡೆಪಾಸಿಟ್ ಮಾಡಲು ಬಂದಿದ್ದರು. ಈ ವೇಳೆ ಡೆಪಾಸಿಟ್ ಮಿಷನ್ ಮೂಲಕ ಹಣ ಹಾಕುವಂತೆ ತನ್ನ ಸಹಾಯಕ ರಾಘವೇಂದ್ರನಿಗೆ ಹೇಳಿದ್ದರು.
ಅಂತೆಯೇ ವಿಜಯ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ರಾಘವೇಂದ್ರ 52 ಸಾವಿರ ಹಣ ಡಿಪಾಸಿಟ್ ಮಾಡಿದ್ದರು. ಡಿಪಾಸಿಟ್ ಮಿಷನ್ ನಲ್ಲಿ ಮಾಹಿತಿ ಭರ್ತಿ ಮಾಡಿ ಡಿಪಾಸಿಟ್ ಬಟನ್ ಒತ್ತೋದನ್ನೇ ರಾಘವೇಂದ್ರ ಮರೆತಿದ್ದರು. ಡಿಪಾಸಿಟ್ ಬಟನ್ ಒತ್ತದ ಕಾರಣ ಮಿಷನ್ ನಲ್ಲೇ 52 ಸಾವಿರ ರೂಪಾಯಿ ಉಳಿದಿತ್ತು.
ಇತ್ತ ಹಣ ಡಿಪಾಸಿಟ್ ಆಗಿದೆ ಎಂದು ವಿಜಯ್ ಹಾಗೂ ರಾಘವೇಂದ್ರ ಬ್ಯಾಂಕ್ ನಿಂದ ಹೊರಗೆ ಬಂದಿದ್ದಾರೆ. ಅದೇ ವೇಳೆಗೆ ಹಣ ಡ್ರಾ ಮಾಡಲು ಹೋದ ವ್ಯಕ್ತಿ ಕಣ್ಣಿಗೆ 52 ಸಾವಿರ ಹಣ ಇರೋದು ಕಂಡಿದೆ. ಯಾರೂ ಇಲ್ಲದ್ದನ್ನ ನೋಡಿದ ವ್ಯಕ್ತಿ 52 ಸಾವಿರ ದೋಚಿ ಪರಾರಿಯಾಗಿದ್ದಾನೆ. ಅನಾಮಿಕ ವ್ಯಕ್ತಿ ಹಣ ತೆಗೆದುಕೊಳ್ಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಕೆಟಿಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ದೂರು ನೀಡಿ 15 ದಿನ ಕಳೆದರೂ ಪೊಲೀಸರು ಹಾಗೂ ಬ್ಯಾಂಕ್ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ ಎಂದು ವಿಜಯ್ ದೂರಿದ್ದಾರೆ.