30 ಲಕ್ಷದ ಲಕ್ಕಿಡಿಪ್ ಆಸೆಗೆ 12.67 ಲಕ್ಷ ರೂ. ಕಳೆದುಕೊಂಡ ಖಾಸಗಿ ಶಾಲಾ ಶಿಕ್ಷಕಿ

ಕಲಬುರಗಿ: ಮೋಸ ಹೋಗೋರು ಇರೋವರಗೆ ಮೋಸ ಮಾಡೋರು ಇದ್ದೇ ಇರುತ್ತಾರೆ. ಅದರಲ್ಲೂ ಇತ್ತೀಚೆಗೆ ನಿಮ್ಮ ಮೊಬೈಲ್ ನಂಬರ್ ಲಕ್ಕಿಡಿಪ್ ನಲ್ಲಿ ಆಯ್ಕೆಯಾಗಿದೆ. ನಿಮಗೆ ಇಷ್ಟು ಬಹುಮಾನ ಬಂದಿದೆ ಅಂತ ಬಣ್ಣದ ಮಾತುಗಳನ್ನು ಹೇಳುವುದು, ಕೌನ್ ಬನೇಗಾ ಕರೋಡ್​​ಪತಿಯಿಂದ ಕರೆ ಮಾಡುತ್ತಿದ್ದೇವೆ ಎನ್ನೋದು, ನಿಮ್ಮ ನಂಬರ್ ಲಕ್ಕಿಡಿಪ್ ನಲ್ಲಿ ಸೆಲೆಕ್ಟ್ ಆಗಿದೆ ಅಂತ ಹೇಳಿ ಅನೇಕರು ಅನೇಕ ರೀತಿಯಿಂದ ಬಣ್ಣದ ಮಾತುಗಳನ್ನು ಹೇಳಿ ಯಾಮಾರಿಸುವುದು ನಡೆಯುತ್ತಿದೆ. ನಂತರ ಬಹುಮಾನ ಮೊತ್ತವನ್ನು ಪಡೆಯಲು ನೀವು ಇಂತಿಷ್ಟು ಹಣ ನೀಡಬೇಕು ಅಂತ ಹೇಳಿ, ಅನೇಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುವ ದೊಡ್ಡ ಜಾಲವೇ ದೇಶದಲ್ಲಿದೆ. ಇಂತಹದೇ ವಂಚನೆಯ ಜಾಲಕ್ಕೆ ಸಿಲುಕಿ ಕಲಬುರಗಿ ನಗರದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಬರೋಬ್ಬರಿ 12.67 ಲಕ್ಷ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಲಬುರಗಿ ನಗರದ ವಿದ್ಯಾನಗರದ ನಿವಾಸಿಯಾಗಿರುವ ಮೂವತ್ತೊಂದು ವರ್ಷದ ಮೇಘನಾ ಎಂಬವರು, ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ 2022ರ ಜೂನ್ 1 ರಂದು, 9661066782 ನಂಬರ್ ನಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಆಕಾಶ್ ವರ್ಮಾ ಅಂತ ತನ್ನನ್ನು ಪರಿಚಯ ಮಾಡಿಕೊಂಡಿದ್ದಾನೆ. ಹಿಂದಿ ಭಾಷೆಯಲ್ಲಿ ಮೇಘನಾ ಅವರಿಗೆ ನಿಮ್ಮ ಮೊಬೈಲ್ ನಂಬರ್ ಲಕ್ಕಿ ಡಿಪ್ ನಲ್ಲಿ ಆಯ್ಕೆಯಾಗಿದೆ. ಬಹುಮಾನ ಮೊತ್ತ 30 ಲಕ್ಷವಿದ್ದು, ನೀವು ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಿಂದ ನಿಮಗೆ ಹಣ ಬರುತ್ತೆ ಅಂತ ಹೇಳಿದ್ದಾನೆ. ಆಗ ಮೇಘನಾ ಅವರು ವಿಚಾರ ಮಾಡಿ ಹೇಳ್ತೇನೆ ಅಂತ ಹೇಳಿ ಸುಮ್ಮನಾಗಿದ್ದಾರೆ. ಆದ್ರೆ ಆಕಾಶ ಶರ್ಮಾ ಪ್ರತಿನಿತ್ಯ ಕರೆ ಮಾಡಿ, ನಿಮ್ಮ ಬಹುಮಾನ ಮೊತ್ತವನ್ನು ಸ್ವೀಕರಿಸಿ ಅಂತ ದುಂಬಾಲು ಬಿದ್ದಿದ್ದಾನೆ. ಆಗ ಶಿಕ್ಷಕಿ ಮೇಘನಾ ಅವರು ಆಯ್ತು ಅಂತ ಹೇಳಿದ್ದಾರೆ. ಆಗ ವಂಚಕ ತನ್ನ ಅಸಲಿ ಆಟವನ್ನು ಆರಂಭಿಸಿದ್ದಾನೆ.

ನೀವು ನಿಮ್ಮ ಬಹುಮಾನ ಮೊತ್ತವನ್ನು ಪಡೆಯಬೇಕಾದರೆ ಮೊದಲು 8,200 ರೂಪಾಯಿ ಹಣವನ್ನು 41059099915, ಎಸ್​​ಬಿಐ ಬ್ಯಾಂಕ್ ಖಾತೆಗೆ ಜಮೆ ಮಾಡಿ, ನಿಮ್ಮ ಬಹುಮಾನ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡುತ್ತೇವೆ ಅಂತ ಹೇಳಿದ್ದಾನೆ. ಮೇಘನಾ ಅವರು ಜಮೆ ಮಾಡಿದ್ದಾರೆ. ವಂಚಕ ಮತ್ತೆ ಹತ್ತಾರು ಕಾರಣ ಹೇಳಿ ತನ್ನ ಅಕೌಂಟ್ ಗೆ ಹಣ ಹಾಕಿಸಿಕೊಂಡಿದ್ದಾನೆ. ವಂಚನಕ ಮಾತನ್ನು ನಂಬಿದ್ದ ಶಿಕ್ಷಕಿ ಮೇಘನಾ ಅವರು 2022ರ ಜೂನ್ 4 ರಿಂದ 2023 ರ ಜನವರಿ 12 ರವರೆಗೆ ಬರೋಬ್ಬರಿ 12,67,700 ರೂಪಾಯಿ ಹಣವನ್ನು ವಂಚಕನ ಖಾತೆಗೆ ಜಮೆ ಮಾಡಿದ್ದಾರೆ.

ಇಷ್ಟೊಂದು ಹಣ ಹಾಕಿದರು ಕೂಡಾ ವಂಚಕ ಬಹುಮಾನ ಮೊತ್ತವನ್ನು ಹಾಕದೇ, ಪ್ರತಿನಿತ್ಯ ಹಣವನ್ನು ಶಿಕ್ಷಕಿ ಮೇಘನಾ ಅವರಿಂದ ಪಡೆದಿದ್ದಾನೆ. ನಂತರ ಬಹುಮಾನ ಮೊತ್ತವನ್ನು ನನ್ನ ಅಕೌಂಟ್ ಗೆ ಜಮೆ ಮಾಡಿ ಅಂತ ದುಂಬಾಲು ಬಿದ್ದಾಗ, ಪೋನ್ ಸ್ವಿಚ್ ಆಪ್ ಮಾಡಿಕೊಂಡಿದ್ದಾನೆ. ಈ ಬಗ್ಗೆ ವಂಚನೆಗೊಳಗಾದ ಖಾಸಗಿ ಶಾಲಾ ಶಿಕ್ಷಕಿ, ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ರಾಕೇಶ್ ವರ್ಮಾ ವಿರುದ್ದ ಸಿಇಎನ್ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಲಕ್ಕಿಡಿಪ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆಯಾಗಿದೆ, ಹಣ ಹಾಕಿ ಅನೇಕ ವಂಚಕರು ಹಣ ಕೇಳಿ ಮೋಸ ಮಾಡುತ್ತಿದ್ದು, ಈ ಬಗ್ಗೆ ಮೋಸ ಹೋಗಬಾರದು ಅಂತ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.