ಶಕ್ತಿ ಯೋಜನೆಯಿಂದಾಗಿ ನಮಗೆ ಬಸ್​ ಸಿಗುತ್ತಿಲ್ಲ, ರಾಜ್ಯದ ವಿವಿದೆಡೆ ವಿದ್ಯಾರ್ಥಿಗಳ ಪ್ರತಿಭಟನೆ

ವಿಜಯಪುರ: 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲಾ-ಕಾಲೇಜುಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ರಜೆ ಮೂಡ್​ನಲ್ಲಿದ್ದ ವಿದ್ಯಾರ್ಥಿಗಳು ಇದೀಗ ಶಾಲಾ-ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಆದ್ರೆ, ಈ ಸಂದರ್ಭದಲ್ಲಿ ರಾಜ್ಯ ವಿವಿಧೆಡೆ ಸರ್ಕಾರಿ ಬಸ್​ಗಳ ಕೊರತೆ ಎದುರಾಗಿದೆ. ಸರಿಯಾದ ಸಮಯಕ್ಕೆ ಬಸ್​ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಕ್ಲಾಸ್​ಗೆ ತಡವಾಗಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರಿಗೆ ಉಚಿತ ಪ್ರಯಾಣ. ಶಕ್ತಿ ಯೋಜನೆ ಹಿನ್ನೆಲೆ ಬಹುತೇಕ ಬಸ್​ಗಳು ಫುಲ್ ರಶ್ ಆಗುತ್ತಿದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಹಲವೆಡೆ ಬಸ್​ಗಾಗಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಶಕ್ತಿ ಯೋಜನೆಯ ಎಫೆಕ್ಟ್​ನಿಂದ ಸರಿಯಾದ ಸಮಯಕ್ಕೆ ಬಸ್​ಗಳು ಬರುತ್ತಿಲ್ಲ. ನಾವು ಶಾಲೆಗಳಿಗೆ ಹೋಗಲು ಆಗುತ್ತಿಲ್ಲ ಎಂದು ವಿಜಯಪುರ ಜಿಲ್ಲೆಯ ಬಸ್ ನಿಲ್ದಾಣದ ಬಳಿ ಎಬಿವಿಪಿ ಸಂಘಟನೆ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಬರಲು ವಿಳಂಬವಾಗುತ್ತಿದೆ. ತರಗತಿಗಳು ತಪ್ಪುತ್ತಿವೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಸೂಕ್ತ ಬಸ್​ಗಳನ್ನು ಬಿಡಬೇಕೆಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಪ್ರತಿಭಟನೆ ವೇಳೆ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ನುಗ್ಗಲು ಮುಂದಾದ ಎಪಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಎದುರು ಟೈರ್​ಗೆ ಬೆಂಕಿ ಹಚ್ಚಿದ ಪ್ರಸಂಗ ನಡೆದಿದೆ. ಅಲ್ಲದೆ ಪೊಲೀಸರ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿಯಾಗಿದೆ. ಇದೇ ವೇಳೆ ತಳ್ಳಾಟ ನೂಕಾಟದಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಾತಾವರಣ ಶಾಂತಗೊಳಿಸಿದರು. ಸ್ಥಳದಲ್ಲಿ ಪೊಲೀಸರು, ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.

ಕೊಪ್ಪಳ ನಗರದಲ್ಲಿ ಸಮರ್ಪಕ ಬಸ್ ಸಂರ್ಪಕ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಅಶೋಕ ಸರ್ಕಲ್ ಮಾರ್ಗವಾಗಿ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಹೆಚ್ಚುವರಿ ಬಸ್ ಬಿಡುವಂತೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.

ಇನ್ನು ಮತ್ತೊಂದೆಡೆ ವಿಜಯಪುರ ನರದಲ್ಲಿರೋ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿ ವಿದ್ಯಾರ್ಥಿಯಿಂದ ಹೆಚ್ಚರುವರಿ 1000 ರೂಪಾಯಿ ಸಂಗ್ರಹಿಸಿದ್ದನ್ನು ವಾಪಸ್ ನೀಡಬೇಕೆಂದು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ ಆಗ್ರಹಿಸಿ ಪ್ರತಿಭಟನೆ ನಡೆಸಿದೆ. ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾವಣೆಯಾದ ಎಐಡಿಎಸ್ಓ ಪದಾಧಿಕಾರಿಗಳು ಹಾಗು ವಿದ್ಯಾರ್ಥೀನಿಯರು ಪ್ರತಿಭಟನೆ ನಡೆಸಿ ಒತ್ತಾಯ ಮಾಡಿದರು. ನಗರದ ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ ಒಂದು ಸಾವಿರ ರೂಪಾಯಿ ಶುಲ್ಕದ ಹೊರತಾಗಿ ಸಂಗ್ರಹಿಸಿದ್ದಾರೆ.

ಈ ಹೆಚ್ಚುವರಿ ಹಣವನ್ನು ವಾಪಸ್ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಆಗ್ರಹಿಸಿದರು. ಇನ್ನು ನ್ಯೂ ಎಜುಕೇಷನ್ ಪಾಲಸಿಯನ್ನು ಹಿಂಪಡೆಯಬೇಕು. ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಹಾಗೂ ಇಂಜಿನೀಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರಯಾಣಿಸಲು ಅಗತ್ಯ ಬಸ್ ಗಳ ಸೇವೆ ಒದಗಿಸಬೇಕು. ಶಾಲಾ ಕಾಲೇಜುಗಳಲ್ಲಿ ಸೂಕ್ತ ಶೌಚಾಲಯ ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.