ಹೆಡ್ ಕಾನಸ್ಟೇಬಲ್ ಹತ್ಯೆ ಪ್ರಕರಣ: ಸಾಂತ್ವನ, ಪರಿಹಾರ ಕೊಡಿಸುವ ಭರವಸೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಗುರುವಾರ ರಾತ್ರಿ ಇಡೀ ನಾಡೇ ತಲೆ ತಗ್ಗಿಸುವಂತಹ ಹೇಯ ಘಟನೆ ನಡೆದಿದ್ದು, ಅಕ್ರಮ‌ ಮರುಳು ಸಾಗಾಣಿಕೆಗೆ ತಡೆ ಹಾಕಲು ಬಂದಿದ್ದ ಹೆಡ್ ಕಾನಸ್ಟೇಬಲ್ ಅವರ ಬೈಕ್​​ ಮೇಲೆಯೇ ಟ್ರ್ಯಾಕ್ಟರ್​​ ಹತ್ತಿಸಿ, ಭಯಾನಕವಾಗಿ ಹತ್ಯೆ ಮಾಡಲಾಗಿದೆ. ಪ್ರಕರಣದ ಸಂಬಂಧ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದು ಸಾಂತ್ವನ ಹೇಳಿದ್ದಾರೆ. ಜೊತೆಗೆ ಪರಿಹಾರ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ. ಇದೆ ವೇಳೆ ಅಕ್ರಮ‌ ಮರುಳು ಸಾಗಾಣಿಕೆ ತಡೆಗೆ ಕೂಡಲೇ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ.

ಪೊಲೀಸ್​​ ಹತ್ಯೆ ಘಟನೆ ನಡೆದಿದ್ದು, ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅವರುಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆ ಹೊರಡಿಸಿದ್ದಾರೆ.

ಟ್ರ್ಯಾಕ್ಟರ್​ ಹರಿಸಿ, ಸಹೋದ್ಯೋಗಿ ಹೆಡ್​ಕಾನ್ಸ್​ಟೇಬಲ್ ಮೈಸೂರ್ ಅವರನ್ನು ಹತ್ಯೆಗೈದಿದ್ದವರ ವಿರುದ್ಧ ಸ್ಥಳೀಯ ಪೊಲೀಸರು ಇದೀಗ ಕೇಸ್​​ ದಾಖಲಿಸಿಕೊಂಡಿದ್ದಾರೆ. ಮರುಳು ದಂಧೆಕೋರರಾದ ಸಿದ್ದಪ್ಪ ಮತ್ತು ಸಾಯಿಬಣ್ಣ ವಿರುದ್ಧ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಿದ್ದಾರೆ.

ದುಷ್ಕರ್ಮಿಗಳು ಭೀಮಾ ನದಿಯಿಂದ ಟ್ರ್ಯಾಕ್ಟರ್​ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ಮರಳು ಸಾಗಣೆ ಟ್ರ್ಯಾಕ್ಟರ್​ ತಡೆಯಲ ಅಕ್ರಮ ಮರಳುಗಾರಿಕೆಯನ್ನು ತಡೆಯಲು ಹೆಚ್​ಸಿ ಮೈಸೂರು ಚೌಹಾಣ್, ಪಿಸಿ ಪ್ರಮೋದ್ ದೊಡ್ಮನಿ ಅವರಿಬ್ಬರೂ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಬೈಕ್​ನಲ್ಲಿ ತೆರಳಿದ್ದರು. ಆ ವೇಳೆ ಪೊಲೀಸರಿದ್ದ ಬೈಕ್​ ಮೇಲೆ ಮರಳು ಟ್ರ್ಯಾಕ್ಟರ್​ ದುಷ್ಕರ್ಮಿಗಳು ಹತ್ತಿಸಿದ್ದರು. ನೆಲೋಗಿ ಠಾಣೆ ಹೆಡ್​ಕಾನ್ಸ್​ಟೇಬಲ್​ ಮೈಸೂರು ಚೌಹಾಣ್​ (51) ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಕಾನ್ಸ್​ಟೇಬಲ್​ ಪ್ರಮೋದ್ ದೊಡ್ಮನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಸಿದ್ದಪ್ಪನನ್ನು ವಶಕ್ಕೆ ಪಡೆದಿರುವ ನೆಲೋಗಿ ಠಾಣೆ ಪೊಲೀಸರು ತಲೆ ಮರೆಸಿಕೊಂಡಿರುವ ಸಾಯಿಬಣ್ಣಗಾಗಿ ಶೋಧ ನಡೆಸಿದ್ದಾರೆ. ಇಬ್ಬರೂ ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.