ಕಾರವಾರ: ವೈದ್ಯಕೀಯ ತುರ್ತು ಸೇವಾ ಕೇಂದ್ರ ಸ್ಥಾಪಿಸಲು ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಸ್ಥಳದ ಕೊರತೆಯಿದ್ದು, ತಾತ್ಕಾಲಿಕವಾಗಿ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರದ ಕಟ್ಟಡದ ಪಕ್ಕದಲ್ಲಿ ತುರ್ತು ಸೇವಾ ಕೇಂದ್ರವನ್ನು ಪ್ರಾರಂಭಿಸಲು ಅನುಮತಿ ಹಾಗೂ ಅದಕ್ಕಾಗಿ ಅನುದಾನ ಲಭ್ಯತೆ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಜಿಲ್ಲೆಯಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಹಾಗೂ ತುರ್ತು ಸೇವಾ ಕೇಂದ್ರ ಆರಂಭಿಸುವ ಕುರಿತು ಸೋಮವಾರ ಕಾರವಾರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಸಭೆ ನಡೆಸಿ ಮಾತನಾಡಿದ ಅವರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ 450 ಹಾಸಿಗೆಗಳ ನಿರ್ಮಾಣ ಹಂತದಲಿದ್ದ ಕಾಮಗಾರಿಯ ಪ್ರಗತಿಯ ಕುರಿತು ಪರಿಶೀಲನೆ ನಡೆಸಿ, ಆಸ್ಪತ್ರೆಗೆ ಹೆಚ್ಚಿನ ಸ್ಥಳವಕಾಶ ಒದಗಿಸಲು ಪಕ್ಕದಲ್ಲಿನ ಸ್ಥಳವನ್ನು ಪರಿಶೀಲಿಸಿದರು. ಆಸ್ಪತ್ರೆ ನಿರ್ಮಾಣದ ಮುಂದುವರಿದ ಕಾಮಗಾರಿಯ ಪ್ರಗತಿ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆ ನಡೆಸಲು ಸೂಚಿಸಿದರು.
ಸಭೆಯಲ್ಲಿ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥೆಯ ನಿರ್ದೇಶಕರು ಗಜಾನನ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ್ ನಾಯಕ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾದಿಮನಿ ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವರಿಷ್ಟಾಧಿಕಾರಿ ಶಿವಾನಂದ ಕುಡ್ಲತಲಕರ್ ಇದ್ದರು.