ಹೊನ್ನಾವರ: ತಾಯಿಯೋರ್ವಳು ತನ್ನ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಸೋಮವಾರ ತಾಲೂಕಿನ ಜಲವಳ್ಳಿ ಗ್ರಾಮದಲ್ಲಿ ನಡೆದಿದೆ.
ಜಲವಳ್ಳಕರ್ಕಿಯ ನಿವಾಸಿ ವನಿತಾ ಮಂಜುನಾಥ ನಾಯ್ಕ (28) ಹಾಗೂ ಆಕೆಯ 2 ವರ್ಷದ ಪುತ್ರಿ ಮನಸ್ವಿ ಮೃತಪಟ್ಟವರು. ಕೌಟುಂಬಿಕ ಕಲಹ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದ್ದು, ಮೃತರ ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಿ ಮರಣೋತ್ತರ ಪರೀಕ್ಷೆಗೆ ನಡೆಸಿದ್ದಾರೆ. ಇನ್ನು ಈ ಕುರಿತು ಮೃತಳ ಸಹೋದರ ಚಿಕ್ಕನಕೋಡದ ನಿವಾಸಿ ದಯಾನಂದ ನಾಯ್ಕ ಹೊನ್ನಾವರ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲೇನಿದೆ.?
ತಂಗಿಯ ಗಂಡ ಮಂಜುನಾಥ್ ನನ್ನ ತಂಗಿಯ ಮೇಲೆ ಸಂಶಯ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಮಾನಸಿಕ ಹಿಂಸೆ ನೀಡುತ್ತಿದ್ದ. ಎರಡನೇ ಹೆಣ್ಣು ಮಗು ಮನಸ್ವಿ ಹುಟ್ಟಿದ ಮೇಲೆ ಈ ಹೆಣ್ಣು ಮಗು ತನ್ನದಲ್ಲ. ಮಗುವನ್ನ ಕರೆದುಕೊಂಡು ಎಲ್ಲಿಯಾದರು ಹೋಗಿ ಸಾಯಿ ಎಂದು ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ. ಆಕೆಗೆ ನಾದಿನಿಯರು ಕಿರುಕುಳ ನೀಡುತ್ತಿದ್ದರು. ಎರಡನೇ ಹೆಣ್ಣು ಮಗು ಹುಟ್ಟಿದ ಬಗ್ಗೆ ಸಂಶಯ ವ್ಯಕ್ತಪಡಿಸಿ ಹೀಯಾಳಿಸಿ, ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದರು. ತನ್ನ ತಂಗಿಗೆ ಬೇರೆ ಕಡೆ ಸಂಬಂಧ ಇದೆ ಎಂದು ಹೇಳಿ ವಿನಾಕಾರಣ ಕಿರುಕುಳ ನೀಡಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದರಿಂದಲೇ ತನ್ನ ತಂಗಿ ವನಿತಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣ ಕುರಿತಂತೆ ಜಲವಳಕರ್ಕಿಯ ನಿವಾಸಿ ಮೃತಳ ಪತಿ ಆರೋಪಿತರಾದ ಮಂಜುನಾಥ ಈಶ್ವರ ನಾಯ್ಕ, ಮೃತಳ ಅತ್ತೆ ಸಾವಿತ್ರಿ ಈಶ್ವರ ನಾಯ್ಕ, ನಾದಿನಿಯರಾದ ತಾರಾ ಮಂಜುನಾಥ ನಾಯ್ಕ, ನೇತ್ರಾ ಶೇಖರ ನಾಯ್ಕ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನು ತಾಲೂಕಾ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆದಿದ್ದು, ನೂರಾರು ಸಂಖ್ಯೆಯಲ್ಲಿ ಮೃತರ ಸಂಬಂಧಿಗಳು ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿ ಎಂದು ಆಗ್ರಹಿಸಿದರು. ನಂತರ ಶಾಸಕ ಸುನೀಲ್ ನಾಯ್ಕ ಭೇಟಿ ನೀಡಿ ಆತ್ಮಹತ್ಯೆಗೆ ಕಾರಣರಾದ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲು ಕ್ರಮ ಕೈಗೊಳ್ಳಿ ಎಂದು ಸಿಪಿಐ ಶ್ರೀಧರ್ ಅವರಿಗೆ ಸೂಚಿಸಿದರು.