ದಾಂಡೇಲಿ : ಒಂದು ಆನೆಯ ಮೂಲಕ ಆರಂಭವಾದ ಜೋಯಿಡಾ ತಾಲ್ಲೂಕಿನ ಫಣಸೋಲಿಯ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಬರುವ ಫಣಸೋಲಿ ಆನೆ ಶಿಬಿರ ಇಂದು 4 ಆನೆಗಳ ಮೂಲಕ ಪ್ರವಾಸಿಗರಿಗೆ ಮನಸಂತೋಷವನ್ನು ನೀಡುವುದರ ಜೊತೆಗೆ ಆನೆ ಶಿಬಿರಕ್ಕೆ ಮತ್ತಷ್ಟು ರಂಗು ತಂದುಕೊಟ್ಟಿದೆ.
ಕಳೆದ ಕೆಲ ವರ್ಷಗಳ ಹಿಂದೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದಡಿ ಆನೆ ಶಿಬಿರವನ್ನು ಆರಂಭಿಸಲಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅಂದು ಪ್ರವಾಸೋದ್ಯಮ ಸಚಿವರಾಗಿದ್ದಾಗ ಈಗಿನ ಶಾಸಕರಾದ ಆರ್.ವಿ.ದೇಶಪಾಂಡೆಯವರು ಆನೆ ಶಿಬಿರದ ಮಹತ್ವಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ ಪರಿಣಾಮವಾಗಿ ಜೋಯಿಡಾ ತಾಲ್ಲೂಕಿನ ಪ್ರವಾಸೋದ್ಯಮದ ಬೆಳವಣಿಗೆಗೂ ನಾಂದಿಯಾಯಿತ್ತಲ್ಲದೆ ಕೆಲವರಿಗೆ ಉದ್ಯೋಗದ ಆಸರೆಯಾಗಿರುವುದು ವಾಸ್ತವ ಸತ್ಯ. ದೂರದ ಶಿವಮೊಗ್ಗದಿಂದ ಬಂದಿರುವ ನುರಿತ ಮಾವುತರು ಆನೆಗಳನ್ನು ಅತ್ಯಂತ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುವ ಮೂಲಕ ಇಲ್ಲಿಯ ಆನೆಗಳು ಜನಸ್ನೇಹಿ ಆನೆಗಳಾಗಿ ಮಾರ್ಪಟ್ಟಿವೆ. ಇತ್ತೀಚೆಗಷ್ಟೆ ಜನ್ಮ ಪಡೆದ ಆನೆ ಮರಿಯಂತೂ ತನ್ನ ಮನಮೋಹಕ ಚೇಷ್ಟೆಗಳ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗುತ್ತಿದೆ. ಇನ್ನೂ 36 ವರ್ಷದ ಆನೆ ಚಂಚಲೆಯ ವಿವಿಧ ಆಟಗಳು ಹಾಗೂ ಮಾವುತನ ಅಣತಿಗೆ ತಕ್ಕಂತೆ ಅದರ ಭಾವ ಭಂಗಿಗಳಿಗೆ ಎಲ್ಲರು ಕೈ ಮುಗಿದು ತಲೆ ಬಾಗಬೇಕು.
ವನ್ಯಜೀವಿ ಇಲಾಖೆಯ ನಿರ್ದೇಶಕರಾದ ಮರಿಯ ಕ್ರಿಸ್ತರಾಜ್ ಮತ್ತು ಎ.ಸಿ.ಎಫ್ ಎಸ್.ಎಸ್.ನಿಂಗಾಣಿಯವರ ಮಾರ್ಗದರ್ಶನ ಹಾಗೂ ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿಯವರ ನೇತೃತ್ವದಲ್ಲಿ ವನ್ಯಜೀವಿ ವಲಯದ ಉಪ ವಲಯಾರಣ್ಯಾಧಿಕಾರಿಗಳು, ವನ್ಯಜೀವಿ ವಲಯದ ಸಿಬ್ಬಂದಿಗಳು ಮತ್ತು ಆನೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿಗಳ ಅವಿರತ ಮತ್ತು ಕಾಳಜಿಯುಕ್ತ ಸೇವೆಯ ಪರಿಣಾಮವಾಗಿ ಫನಸೋಲಿಯ ಆನೆ ಶಿಬಿರ ಇಂದು ತನ್ನದೇ ಆದ ಹಿರಿಮೆ ಗರಿಮೆಯನ್ನು ಹೆಚ್ಚಿಸಿಕೊಂಡು ಪ್ರವಾಸಿಗರ ಮನಸೆಳೆಯುತ್ತಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಿ, ಕೆಲ ಹೊತ್ತು ನಾಲ್ಕು ಆನೆಗಳ ದರ್ಶನವನ್ನು ಪಡೆದು ಅದರ ವಿವಿಧ ರೀತಿಯ ಆಕರ್ಷಕ ಚಟುವಟಿಕೆಗಳನ್ನು ನೋಡಿ ಸಂಭ್ರಮಿಸುತ್ತಾರೆ.
ಆನೆಗಳನ್ನು ಪಳಗಿಸಿ, ಅದನ್ನು ಪ್ರೀತಿಯ ಮತ್ತು ಜನಸ್ನೇಹಿಯನ್ನಾಗಿಸಿದ ಮಾವುತರ ಸಾಹಸಿಕ ಕಾರ್ಯ ಮಾತ್ರ ಅಭಿನಂದನೀಯ. ಆನೆಗಳನ್ನು ಪಳಗಿಸಿ, ಆನೆ ಶಿಬಿರಕ್ಕೆ ಹೊಸ ಜೀವಕಳೆಯನ್ನು ತಂದುಕೊಟ್ಟಿರುವ ಅತ್ಯಂತ ಸಾಹಸಿಕ ಮತ್ತು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಈ ಮಾವುತರುಗಳಿಗೆ ಇಲಾಖೆಯಡಿ ಖಾಯಂ ನೌಕರಿ ಕೊಡಿಸುವ ನಿಟ್ಟಿನಲ್ಲಿ ಶಾಸಕರು ಸೇರಿದಂತೆ ರಾಜ್ಯ ಸರಕಾರ ಅಗತ್ಯ ಕ್ರಮವನ್ನು ಕೈಗೊಂಡು, ಅವರನ್ನು ನಂಬಿರುವ ಅವರ ಕುಟುಂಬಸ್ಥರಿಗೆ ಆಸರೆಯನ್ನು ನೀಡಬೇಕಾಗಿದೆ.