ಎರಡ್ಮೂರು ದಿನಗಳಿಂದ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ಅವರು, ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿಯನ್ನು ಕರೆಯಿಸಿಕೊಂಡು ಕಾರು ಗಿಫ್ಟ್ ನೀಡಿರುವ ಸುದ್ದಿ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಬರೀ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಇದೀಗ ತಮಿಳು ನಾಡಿನ ರಾಜಕೀಯ ವಲಯದಲ್ಲೂ ಅದು ಚರ್ಚೆಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತ ನಡೆ ಎಂದು ಹೇಳಲಾಗುತ್ತಿದ್ದು, ಕಾರು ಕೊಟ್ಟಿರುವ ಕಮಲ್ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
ಶರ್ಮಿಳಾ ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿ. ಅವತ್ತು ಮಹಿಳಾ ಚಾಲಕಿಯರನ್ನು ಗೌರವಿಸುವುದಕ್ಕಾಗಿ ಡಿಎಂಕೆ ಸಂಸದೆ ಕನಿಮೊಳಿ ಕೊಯಮತ್ತೂರಿಗೆ ಬಂದಿದ್ದರು. ಚಾಲಕಿಯರನ್ನು ಗೌರವಿಸಿದ ಕೆಲವೇ ಗಂಟೆಗಳಲ್ಲೇ ಕನಿಮೊಳಿ ಅವರು ಶರ್ಮಿಳಾ ಚಲಾಯಿಸುತ್ತಿದ್ದ ಬಸ್ ಏರಿದ್ದಾರೆ. ಇಲ್ಲಿಯೇ ಎಡವಟ್ಟು ಆಗಿದೆ.
ಶರ್ಮಿಳಾ ಚಲಾಯಿಸುತ್ತಿದ್ದ ಬಸ್ ಏರಿದ್ದ ಕನಿಮೊಳಿಗೆ ಆ ಬಸ್ ನಲ್ಲಿದ್ದ ಕಂಡಕ್ಟರ್ ಟಿಕೆಟ್ ತಗೆದುಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಶರ್ಮಿಳಾ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಂಸದರ ನಮ್ಮನ್ನು ಗೌರವಿಸುವುದಕ್ಕಾಗಿ ಬಸ್ ಏರಿದ್ದಾರೆ. ಬಸ್ ನಲ್ಲಿ ಅವರು ಪ್ರಯಾಣಿಸುತ್ತಿರುವುದು ನಮಗೆ ಗೌರವ. ಟಿಕೆಟ್ ತಗೆದುಕೊಳ್ಳುವುದು ಬೇಡ ಎಂದಿದ್ದಾರೆ ಶರ್ಮಿಳಾ. ಈ ವಿಚಾರವಾಗಿ ಕಂಡಕ್ಟರ್ ಗೂ ಮತ್ತು ಶರ್ಮಿಳಾಗೂ ಗಲಾಟೆ ಆಗಿದೆ. ಈ ಗಲಾಟೆಗೆ ಈಗ ನಾನಾ ಬಣ್ಣಗಳು ಮೆತ್ತಿಕೊಂಡಿವೆ.
ಈ ಘಟನೆಯಾದ ಕೆಲವೇ ಗಂಟೆಗಳಲ್ಲೇ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಒಂದು ಕಡೆಯಾದರೆ, ಮತ್ತೊಂದು ಕಡೆ ಬಸ್ ಮಾಲೀಕರೆ ಶರ್ಮಿಳಾರನ್ನು ಕೆಲಸದಿಂದ ತಗೆದುಹಾಕಿದ್ದಾರೆ ಎನ್ನುವ ಸುದ್ದಿಯೂ ಇದೆ. ಸ್ವಯಂ ಪ್ರಚಾರಕ್ಕಾಗಿ ಸಿಲೆಬ್ರಿಟಿಗಳನ್ನು ಬಸ್ ನಲ್ಲಿ ಹತ್ತಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಸ್ ಮಾಲೀಕರು ಶರ್ಮಿಳಾರನ್ನು ಕೆಲಸದಿಂದ ತಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಸುದ್ದಿಯನ್ನು ಮಾಲೀಕರು ನಿರಾಕರಿಸಿದ್ದಾರೆ.
ಮತ್ತೊಂದು ಕಡೆ ಶರ್ಮಿಳಾ ಡಿಎಂಕೆ (DMK) ಬೆಂಬಲಿಗರು. ಹಾಗಾಗಿ ಕನಿಮೊಳಿ ಅವರ ಬೆಂಬಲಕ್ಕೆ ನಿಂತು ಟಿಕೆಟ್ ರಹಿತ ಪ್ರಯಾಣ ಮಾಡಿಸಲು ಮುಂದಾಗಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ. ಇದೇ ಏನೇ ಆದರೂ ಕೆಲಸ ಕಳೆದುಕೊಂಡು ಶರ್ಮಿಳಾಗೆ ಕಮಲ್ ಹಾಸನ್ ಕಾರು ಗಿಫ್ಟ್ ನೀಡುವ ಮೂಲಕ ಅವರ ಬದುಕಿಗೆ ನೆರವಾಗಿದ್ದಾರೆ.