ಪ್ರವಾಸೋದ್ಯಮದ ಹಿರಿಮೆ ಹೆಚ್ಚಿಸುತ್ತಿರುವ ಮೌಳಂಗಿ ಇಕೋ ಪಾರ್ಕ್

ದಾಂಡೇಲಿ : ಹಚ್ಚ ಹಸಿರಿನ ದಟ್ಟ ಕಾಡು, ಸುಂದರ ಮತ್ತು ಸ್ವಚ್ಚ ಶುಭ್ರ ಕಾಳಿ ನದಿ, ವಿವಿಧ ಸ್ತರಗಳ ಜೀವವೈವಿಧ್ಯತೆಗಳ ಆಗರವಾಗಿರುವ ದಾಂಡೇಲಿ-ಜೋಯಿಡಾ ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ಮೂಲಕ ಪ್ರವಾಸೋದ್ಯಮ ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸಿದ ಕೀರ್ತಿಯನ್ನು ಹೊಂದಿರುವ ಮೌಳಂಗಿ ಇಕೋ ಪಾರ್ಕ್ ಮಾತ್ರ ಜೋಯಿಡಾ ತಾಲ್ಲೂಕು ವ್ಯಾಪ್ತಿಗೆ ಬರುತ್ತಿದೆಯಾದರೂ ದಾಂಡೇಲಿ ನಗರದ ಸಮೀಪದಲ್ಲಿದೆ.

ಅರಣ್ಯ ಇಲಾಖೆಯ ನೇತೃತ್ವದಲ್ಲಿ ಮೌಳಂಗಿ ಗ್ರಾಮ ಅರಣ್ಯ ಸಮಿತಿಯ ಮೂಲಕ ಮೌಳಂಗಿ ಇಕೋ ಪಾರ್ಕ್ ಪ್ರವಾಸಿಗರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬರುತ್ತಿದೆ.

ಒಂದು ಕಡೆ ಕಾಳಿ ನದಿ, ಇನ್ನೊಂದು ಕಡೆ ದಟ್ಟ ಅರಣ್ಯ, ಇವುಗಳ ನಡುವೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಇಕೋ ಪಾರ್ಕ್ ಅಂದ ಹಾಗೆ ಇಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ವಿವಿಧ ರೀತಿಯ ಮನೊರಂಜನಾ ಚಟುವಟಿಕೆಗಳನ್ನು ಅಳವಡಿಸಲಾಗಿದೆ. ಬೋಟಿಂಗ್, ಕಾಯಕಿಂಗ್ ಸೇರಿದಂತೆ ಇನ್ನಿತರ ಜಲಸಾಹಸ ಚಟುವಟಿಕೆಗಳು ಇಲ್ಲಿ ನಡೆಯುತ್ತಿದೆ. ಇನ್ನೂ ಜೋಕಾಲಿ, ಜಾರು ಬಂಡಿ, ಗೂಳಿಯಾಟ ಹೀಗೆ ಇನ್ನಿತರ ಆಕರ್ಷಕ ಚಟುವಟಿಕೆಗಳು ಪ್ರವಾಸಿಗರಿಗೆ ಮತ್ತಷ್ಟು ಸಂತಸವನ್ನು ನೀಡುತ್ತಿದೆ.