ಅಂಕೋಲಾ: ಗೋಖಲೆ ಸೆಂಟೆನರಿ ಕಾಲೇಜಿಗೆ ನ್ಯಾಕ್ “ಎ” ಪ್ಲಸ್ ಶ್ರೇಣಿ.ಶೈಕ್ಷಣಿಕ ಕ್ರಾಂತಿ ಮೂಡಿಸಿದ ಗೋಖಲೆ ಸೆಂಟೆನರಿ ಈಗ ಜಿಲ್ಲೆಯ ಲೀಡ್ ಕಾಲೇಜು.

ಅಂಕೋಲಾ: ಪಟ್ಟಣದ ಪ್ರತಿಷ್ಠಿತ ಗೋಖಲೆ ಸೆಂಟೆನರಿ ಕಾಲೇಜು ಇತ್ತೀಚಿಗೆ ಜರುಗಿದ ನಾಲ್ಕನೇ ಆವೃತ್ತಿಯ ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಿ.ಜಿ.ಪಿ.ಎ 3.34 ಅಂಕ ಪಡೆದು ‘ಎ’ ಪ್ಲಸ್ (ಎ+) ಶ್ರೇಣಿಯೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಲೀಡ್ ಮಹಾವಿದ್ಯಾಲಯವಾಗಿ ಹೊರಹೊಮ್ಮಿದೆ.
ನ್ಯಾಕ್ ಪಿಯರ್ ತಂಡದ ಚೇರ್ಮನರಾಗಿ ಮುಂಬೈ ಎಲ್ಫಿನಸ್ಟನ್ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ವಸಂತ ವಿ. ಹೆಳವಿರೆಡ್ಡಿ, ಸದಸ್ಯ ಸಂಯೋಜಕರಾಗಿ ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಸುರೇಶ ರಂಗರಾಜನ್ ಮತ್ತು ಸದಸ್ಯರಾಗಿ ತಮಿಳುನಾಡು ನಾಗರಕೊಯಿಲ್ ಸ್ಕಾಟ್ ಕ್ರಿಶ್ಟಿಯನ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಜೆಜರ್ ಜೆಬನ್ಸನ್ ಕಾರ್ಯ ನಿರ್ವಹಿಸಿದ್ದರು. ಈ ಕುರಿತು ಕಾಲೇಜಿನ ಪ್ರಾಚಾರ್ಯ ಸಿದ್ದಲಿಂಗಸ್ವಾಮಿ ವಸ್ತ್ರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಲೇಜಿನ ಸಾಧನೆಗೆ ಕೆನರಾ ವೆಲ್ ಫೇರ್ ಟ್ರಸ್ಟಿನ ಅಧ್ಯಕ್ಷ ಎಸ್. ಪಿ. ಕಾಮತ ಅವರು ಪ್ರಾಚಾರ್ಯರು ಮತ್ತು ಸಿಬ್ಬದಿಗಳನ್ನು ಅಭಿನಂದಿಸಿದ್ದಾರೆ.

ಇತಿಹಾಸ ಮರುಕಳಿಸಲಿ
ದಿನಕರ ದೇಸಾಯಿ ಅವರ ಮೂಲಕ ಸದುದ್ದೇಶಪೂರ್ವಕವಾಗಿ ಜನ್ಮತಾಳಿದ ಪಟ್ಟಣದ ಗೋಖಲೆ ಸೆಂಟೇನರಿ ಕಾಲೇಜು ತಾಲ್ಲೂಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಹೆಮ್ಮೆಯ ಜಿ.ಸಿ ಕಾಲೇಜು. ಅಂದು ಗುಣಮಟ್ಟದ ಬೋಧನೆ ಮತ್ತು ಉನ್ನತ ಶೈಕ್ಷಣಿಕ ಚಟುವಟಿಕೆಗಳ ಮೂಲಕ ನಾಡಿನ ಗಮನ ಸೆಳೆದಿತ್ತು. ಸರ್ಕಾರಿ ಪದವಿ ಕಾಲೇಜಿನ ಆರಂಭದ ನಂತರವೂ ತನ್ನ ಪ್ರಖ್ಯಾತಿಯನ್ನು ಕಾಪಾಡಿಕೊಂಡು ಬಂದಿರುವುದು ವಿಶೇಷ. ಈ ಹಿಂದಿನ ಪ್ರಾಂಶುಪಾಲರು ಹಾಗೂ ನೂತನ ಪ್ರಾಂಶುಪಾಲರು ಶೈಕ್ಷಣಿಕ ಮತ್ತು ಸಹ ಸಂಬಂಧಿ ಚಟುವಟಿಕೆಗಳಿಗೆ ಆದ್ಯತೆ ನೀಡಿದ ಪರಿಣಾಮ ಎ ಪ್ಲಸ್ ಮಾನ್ಯತೆ ಗಳಿಸಲು ಸಾಧ್ಯವಾಗಿದೆ. ನೂತನ ಪ್ರಾಂಶುಪಾಲರಾಗಿ ಸಿದ್ದಲಿಂಗ ಸ್ವಾಮಿವಸ್ತ್ರದ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ತಾಲೂಕಿನ ಜನತೆ ಮತ್ತೆ ಗೋಖಲೆ ಸೆಂಟೇನರಿ ಕಾಲೇಜಿನ ಪ್ರಖ್ಯಾತಿಯ ಇತಿಹಾಸ ಮರುಕಳಿಸಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಕಾಲೇಜಿಗೆ ಎ ಪ್ಲಸ್ ಮಾನ್ಯತೆ ಬಂದಿರುವುದಕ್ಕೆ ಹಳೆಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹರ್ಷ ತೋರ್ಪಡಿಸುತ್ತಿದ್ದಾರೆ.