ನವದೆಹಲಿ: ಕಪ್ಪು ಹಣ ಬಿಳಿ ಮಾಡಿಕೊಳ್ಳಲು ನಾಮಕಾವಸ್ತೆ ಸಿನಿಮಾ ತಯಾರಿಸುತ್ತಾರೆ ಎಂಬಂತಹ ಆರೋಪ ಚಿತ್ರರಂಗಗಳಲ್ಲಿ ಕೇಳಿಬರುತ್ತಿರುತ್ತವೆ. ವಿಶ್ವದ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ನಕಲಿ ಚಿತ್ರ, ನಕಲಿ ವಿತರಕರ ಹೆಸರಿನಲ್ಲಿ 1,500 ರೂ ಲಪಟಾಯಿಸಿರುವ ಸಂಗತಿಯನ್ನು ಸೆಬಿ ಪತ್ತೆಹೆಚ್ಚಿದೆ. ಎರೋಸ್ನ ಬೆನ್ನುಬಿದ್ದಿದ್ದ ಸೆಬಿ, ಅದರ ಎಂಡಿ ಆರ್ಜನ್ ಲುಲ್ಲಾ ಮತ್ತು ಸಿಇಒ ಪ್ರದೀಪ್ ಕುಮಾರ್ ದ್ವಿವೇದಿ ಅವರನ್ನು ಕಂಪನಿಯಲ್ಲಿ ಬೋರ್ಡ್ ಸ್ಥಾನ ಹೊಂದದಂತೆ ನಿರ್ಬಂಧಿಸಿ ಜೂನ್ 22ರಂದು ಮಧ್ಯಂತರ ಆದೇಶ ಹೊರಡಿಸಿದೆ. ಹಾಗೆಯೇ, ಮುಂದಿನ ಆದೇಶ ಬರುವವರೆಗೂ ಎರೋಸ್ ಇಂಟರ್ನ್ಯಾಷನಲ್ ಹಾಗೂ ಬೇರೆ ಎರಡು ಸಂಬಂಧಿತ ಕಂಪನಿಗಳು ಷೇರು ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸದಂತೆ ನಿಷೇಧ ಕೂಡ ಹಾಕಲಾಗಿದೆ. ಅಂದರೆ ಇದರ ಯಾವ ಷೇರುಗಳ ವಹಿವಾಟು ನಡೆದಂತೆ ನಿರ್ಬಂಧಿಸಲಾಗಿದೆ. ಸೆಬಿಯಿಂದ ತನಿಖೆ ಪೂರ್ಣ ಆಗುವವರೆಗೂ ಎರೋಸ್ ಇಂಟರ್ನ್ಯಾಷನಲ್ನ ಸಾರ್ವಜನಿಕ ಷೇರುದಾರರು ಮತ್ತು ಇತರ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗಾಗಿ ಹಾಗೂ ಎರೋಸ್ನ ಷೇರುಗಳ ಕುಸಿತ ಆಗದಂತೆ ಎಚ್ಚರ ವಹಿಸುವ ಸಲುವಾಗಿ ಸೆಬಿ ಈ ಕ್ರಮ ಕೈಗೊಂಡಿದೆ.
ಸೆಬಿ ಮಧ್ಯಂತರ ಆದೇಶ ಹೊರಬಂದದ್ದು ಜೂನ್ 22ರಂದು. ಆಗ ಅದರ ಷೇರು ಬೆಲೆ 26 ರೂಗೂ ಹೆಚ್ಚು ಇತ್ತು. ಜೂನ್ 23ರಂದು ಅದರ ಬೆಲೆ 21.10 ರೂಗೆ ಇಳಿದಿದೆ. ಶೇ. 6ರಷ್ಟು ಕುಸಿತ ಕಂಡಿದೆ.
2019-20ರ ಹಣಕಾಸು ವರ್ಷದಲ್ಲಿ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ಬಿಡುಗಡೆ ಮಾಡಿದ ಹಣಕಾಸು ವರದಿ ಸೆಬಿ ಗಮನ ಸೆಳೆದಿತ್ತು. ಅದರಲ್ಲಿ 1,553.52 ಕೋಟಿ ರೂನಷ್ಟು ನಷ್ಟ ಆಗಿದೆ ಎಂದು ವರದಿಯಲ್ಲಿ ತೋರಿಸಲಾಗಿತ್ತು. ಚಲನಚಿತ್ರಗಳ ವಿತರಣಾ ಹಕ್ಕು, ಅಡ್ವಾನ್ಸ್ ಇತ್ಯಾದಿಯಲ್ಲಿ ನಷ್ಟ ಎನ್ನಲಾಗಿತ್ತು. ಈ ಪೈಕಿ ಥಿಯೇಟರ್ಗಳಲ್ಲಿ ಚಿತ್ರಗಳ ಬಿಡುಗಡೆಗೆ ಮತ್ತು ಸೆಟಿಲೈಟ್ ಬ್ರಾಡ್ಕ್ಯಾಸ್ಟಿಂಗ್ಗೆ ಕಮರ್ಷಿಯಲ್ ಹಕ್ಕು ಇತ್ಯಾದಿಗೆ 519.98 ಕೋಟಿ ರೂ ಹಣ ನಷ್ಟವಾಗಿದೆ ಎಂದು ವರದಿಯಲ್ಲಿ ಬಿಂಬಿಸಲಾಗಿತ್ತು. ಅ ವರ್ಷ ಸಲ್ಲಿಸಿದ ಈ ಫೈಲಿಂಗ್ ಬಗ್ಗೆ ಎನ್ಎಸ್ಇಗೆ ಅನುಮಾನ ಬಂದು, ಸೆಬಿಯ ಗಮನಕ್ಕೆ ತಂದಿತ್ತು. ಸೆಬಿ ದರ ಜಾಡು ಹಿಡಿದು ಹೊರಟಾಗ ಭಯಂಕರ ಸತ್ಯಗಳು ಹೊರಬಂದಿವೆ.
ಸೆಬಿ ನೀಡಿರುವ ಮಾಹಿತಿ ಪ್ರಕಾರ, ಕಳೆದ 10 ವರ್ಷಗಳಿಂದಲೂ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ನಕಲಿ ಸಿನಿಮಾ, ನಕಲಿ ವಿತರಕರ ಹೆಸರಿನಲ್ಲಿ ಸುಳ್ಳು ಲೆಕ್ಕಗಳನ್ನು ಸೃಷ್ಟಿಸಿತ್ತು. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಅದು ದುರುಪಯೋಗಿಸಿಕೊಂಡು ಹಣ ಮಾಡಿಕೊಂಡಿದೆ. ನಕಲಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಮುಂಗಡ ಕೊಟ್ಟಿರುವ ಲೆಕ್ಕ ತೋರಿಸಿದೆ. ಸೆಟಿಲೈಟ್ ಮತ್ತು ವಿತರಣಾ ಹಕ್ಕುಗಳನ್ನು ಖರೀದಿಸಿದ ನಕಲಿ ಕಂಪನಿಗಳು ನೀಡಬೇಕಾದ ಹಣವನ್ನು ಮನ್ನಾ ಮಾಡಲಾಗಿದೆ. ಹಣ ಪಡೆಯಲು ಒಂದು ವರ್ಷದ ಗಡುವು ಇದ್ದರೂ ಎರೋಸ್ ಸಂಸ್ಥೆ ತರಾತುರಿಯಲ್ಲಿ ಆ ಹಣವನ್ನು ಮನ್ನಾ ಮಾಡಿದೆ. ಚಲನಚಿತ್ರಗಳ ನಿರ್ಮಾಣಕ್ಕಾಗಿ ಕಂಪನಿ ಸಾಕಷ್ಟು ಹಣವನ್ನು ವರ್ಗಾವಣೆ ಮಾಡಿದ್ದರೂ ಆ ಯಾವ ಸಿನಿಮಾ ಕೂಡ ನಿರ್ಮಾಣವಾಗಿಲ್ಲ.
ಸೆಬಿ ಈ ಒಪ್ಪಂದಗಳ ಪ್ರತಿಗಳನ್ನು ಕೊಡಬೇಕೆಂದು ಎರೋಸ್ ಸಂಸ್ಥೆಯನ್ನು ಕೇಳಿದಾಗ ಅಸ್ಪಷ್ಟ ಮಾಹಿತಿ ಸಿಕ್ಕಿದೆ. ವಿತರಣಾ ಹಕ್ಕು ಮತ್ತು ಪ್ರಸಾರ ಹಕ್ಕು ಕೊಡಲಾದ 17 ಸಂಸ್ಥೆಗಳ ಪೈಕಿ ಹತ್ತು ಪೂರ್ಣ ನಕಲಿಯೆ ಅಗಿವೆ. ಉಳಿದ 7 ಕಂಪನಿಗಳ ಜಾಡು ಹಿಡಿಯುವಲ್ಲಿ ಸೆಬಿ ಯಶಸ್ವಿಯಾದರೂ ಅವುಗಳಿಂದಲೂ ಅಸ್ಪಷ್ಟ ಮಾಹಿತಿ ಬಂದಿದೆ. ಈ ಕಂಪನಿಗಳ ನಿರ್ದೇಶಕರೂ ನಕಲಿಗಳೇ ಅಗಿವೆ. ಚಲನ ಚಿತ್ರಗಳ ಹಕ್ಕು ಪಡೆದ ಇವರು ಆ ಹಕ್ಕನ್ನು ವಾಣಿಜ್ಯಾತ್ಮಕವಾಗಿ ಹೇಗೆ ಬಳಕೆ ಮಾಡಲಾಯಿತು ಇತ್ಯಾದಿ ಯಾವ ಮಾಹಿತಿಯನ್ನೂ ಈ ಕಂಪನಿಗಳು ನೀಡಲು ವಿಫಲವಾಗಿವೆ. ಅಲ್ಲದೇ ಈ ಸಿನಿಮಾಗಳು ಪ್ರಸಾರವಾಗಬೇಕಾದರೆ ಸೆನ್ಸಾರ್ ಮಂಡಳಿಯಿಂದ ಪ್ರತ್ಯೇಕವಾಗಿ ಕನಿಷ್ಠ 977 ಅಪ್ರೂವಲ್ಗಳನ್ನು ಪಡೆಯಬೇಕಾಗುತ್ತದೆ. ಆದರೆ, ಸೆಬಿಯ ತನಿಖಾಧಿಕಾರಿಗಳಿಗೆ ಒಂದಾದರೂ ಅನುಮೋದನೆ ಕಂಡುಬರಲಿಲ್ಲ. ಇವರೆಲ್ಲರೂ ನಕಲಿ ವಿತರಕರೆಂಬುದು ಸೆಬಿಗೆ ಮನದಟ್ಟಾಗಿದೆ.
ಆದರೆ, ಸೆಬಿ ಆದೇಶವನ್ನು ಎರೋಸ್ ಇಂಟರ್ನ್ಯಾಷನಲ್ ಮೀಡಿಯಾ ಸಂಸ್ಥೆ ಪ್ರಶ್ನಿಸಿದೆ. ತನ್ನಿಂದ ಯಾವುದೇ ಅಕ್ರಮ ಅಗಿಲ್ಲ. ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅದು ಹೇಳಿದೆ.
ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ಬಹಳಷ್ಟು ದೊಡ್ಡದೊಡ್ಡ ಹಾಲಿವುಡ್ ಸಿನಿಮಾಗಳನ್ನು ನಿರ್ಮಿಸಿದೆ. ಬಾಜಿರಾವ್ ಮಸ್ತಾನಿ ಇತ್ಯಾದಿ ದೊಡ್ಡಬಜೆಟ್ನ ಬಾಲಿವುಡ್ ಚಿತ್ರಗಳನ್ನೂ ನಿರ್ಮಿಸಿದೆ.