ಗೋಹತ್ಯೆ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಇಲ್ಲ: ಸಚಿವ ಎಚ್‌.ಕೆ.ಪಾಟೀಲ್‌

ಹುಬ್ಬಳ್ಳಿ (ಜೂ.11): ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಗೋ ಹತ್ಯೆ ಕಾಯ್ದೆ ತಿದ್ದುಪಡಿ ಕುರಿತು ಎಲ್ಲಡೆ ಸುದ್ದಿ ಹಬ್ಬಿಸಲಾಗುತ್ತಿದೆ. ಇದರ ಚರ್ಚೆ ಅನವಶ್ಯಕ. ಸರ್ಕಾರದ ಮಟ್ಟದಲ್ಲಿ ಇಂಥ ಯಾವುದೇ ಪ್ರಸ್ತಾವನೆ ಇಲ್ಲ. ಇದನ್ನು ಜಾರಿಗೊಳಿಸುವುದಾಗಲಿ, ತಿದ್ದುಪಡಿ ಮಾಡುವುದರಿಂದ ಯಾವುದೇ ಮಹತ್ವ ಇಲ್ಲ. ಈ ಕುರಿತು ಮಾತನಾಡುವುದು ಅಪ್ರಸ್ತುತ ಎಂದರು.

ಸಿದ್ಧಾರೂಢರ ಮಠಕ್ಕೆ ಭೇಟಿ: ಸಚಿವರಾದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದ ಕಾನೂನು ಹಾಗೂ ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹುಬ್ಬಳ್ಳಿಯಲ್ಲಿ ಟೆಂಪಲ್‌ ರನ್‌ ಮಾಡಿದರು. ಜತೆಗೆ ಕೆಲ ಹಿರಿಯರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಸಂಜೆ ಇಲ್ಲಿನ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ದರ್ಶನ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಸಚಿವರನ್ನು ಟ್ರಸ್ಟ್‌ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಚೇರ್‌ಮನ್‌ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್‌- ಚೇರ್‌ಮನ್‌ ಉದಯಕುಮಾರ ಡಿ. ನಾಯಕ, ಧರ್ಮದರ್ಶಿ ಕೆ.ಎಲ್‌. ಪಾಟೀಲ, ಶಾಮಾನಂದ ಪೂಜೇರಿ, ಚನ್ನವೀರ ಮುಂಗುರವಾಡಿ, ವಿ.ವಿ. ಕಾಮರೆಡ್ಡಿ, ಬಾಳು ಮಗಜಿಕೊಂಡಿ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಸೇರಿದಂತೆ ಹಲವರಿದ್ದರು. ಬಳಿಕ ಪತೇಶಾವಲಿ ದರ್ಗಾಕ್ಕೆ ಭೇಟಿ ನೀಡಿದ್ದರು. ತದನಂತರ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಅವರ ಮನೆಗೆ ಭೇಟಿ ನೀಡಿ ಕೆಲಕಾಲ ಸಮಾಲೋಚನೆ ನಡೆಸಿದರು. ಅಲ್ಲಿಂದ ನೇತ್ರ ತಜ್ಞ ಡಾ. ಎಂ.ಎಂ. ಜೋಶಿ ಅವರ ಮನೆಗೆ ತೆರಳಿ ಅಲ್ಲೂ ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವರೊಂದಿಗೆ ಪಕ್ಷದ ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ, ಮುಖಂಡರಾದ ಎಫ್‌.ಎಚ್‌. ಜಕ್ಕಪ್ಪನವರ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.