ಆರೋಪಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳನ್ನು ಒದಗಿಸುವಂತೆ ಕುಸ್ತಿಪಟುಗಳನ್ನು ಕೇಳಿದ ಪೊಲೀಸರು

ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದ ವಿಡಿಯೋ, ಫೋಟೊಗಳು, ವಾಟ್ಸ್​ಆ್ಯಪ್ ಚಾಟ್​ಗಳನ್ನು ಒದಗಿಸುವಂತೆ ಪೊಲೀಸರು ಕೇಳಿದ್ದಾರೆ. ಪ್ರತಿಭಟನಾಕಾರರು ಪೊಲೀಸ್​ ತನಿಖೆಯನ್ನು ನಂಬುವುದಿಲ್ಲ, ಬಿಜೆಪಿ ಸಂಸದರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದ್ದು, ಅವರು ಇನ್ನೂ ಜೈಲಿಗೆ ಹೋಗದೆ ಹೊರಗಿರುವುದು ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದರು.

ಈ ಕುರಿತು ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ನಾವು ಪ್ರಕರಣವನ್ನು ಮುನ್ನಡೆಸಲು ಸಿದ್ಧರಿದ್ದೇವೆ ಆದರೆ ನಿಮ್ಮ ಆರೋಪವನ್ನು ಪುಷ್ಠಿಗೊಳಿಸಲು ಬೇಕಾದ ಸಾಕ್ಷ್ಯಗಳನ್ನು ಒದಗಿಸಿ, ನಿಮ್ಮ ಬಳಿ ಫೋಟೊ, ವಾಟ್ಸಾಪ್​ ಚಾಟ್ ಅಥವಾ ಇನ್ಯಾವುದೇ ವಿಡಿಯೋಗಳು ಇದ್ದರೂ ಅದನ್ನು ನಮಗೆ ನೀಡಿ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬಂಧನವಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದಿಲ್ಲ ಎಂದು ಕುಸ್ತಿಪಟುಗಳು ಹೇಳಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಈ ಹಿಂದೆ ಲೈಂಗಿಕ ದುರ್ವರ್ತನೆಯ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.

ನನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ, ನಿಮ್ಮ ಬಳಿ (ಕುಸ್ತಿಪಟುಗಳು) ಏನಾದರೂ ಸಾಕ್ಷ್ಯಾಧಾರಗಳಿದ್ದರೆ ಅದನ್ನು ಕೋರ್ಟ್‌ಗೆ ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದರು.