ಉತ್ತರ ಪ್ರದೇಶ: ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ. ಸುಮಾರು 10 ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಗುರುಗ್ರಾಮದಲ್ಲಿರುವ ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ.
ಅದರಲ್ಲೂ ಉತ್ತರ ಪ್ರದೇಶದ ಗಡಿ ಭಾಗದಲ್ಲಿ ರಣಮಳೆಯಿಂದ ಜನ ಹೈರಾಣಾಗಿ ಹೋಗಿದ್ದಾರೆ. ದೆಹಲಿ ಮತ್ತು ಹರಿಯಾಣದ ಗುರುಗ್ರಾಮ ಸಂಪರ್ಕ ಕಲ್ಪಿಸುವ ಎಕ್ಸ್ಪ್ರೆಸ್ ವೇ ಕಳೆದ 24 ಗಂಟೆಯಿಂದ ಸುರಿಯುತ್ತಿರುವ ರಣಮಳೆಗೆ ಮುಳುಗಿ ಹೋಗಿದೆ. ವಾಹನ ಚಲಿಸಲಾಗದೇ ರಸ್ತೆ ಸಂಪರ್ಕ ಕಡಿತಗೊಂಡು ಸವಾರರು ಪರದಾಡುವಂತಾಗಿದೆ.
ಉತ್ತರ ಪ್ರದೇಶದ ಕೆಲ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಗೋಡೆ ಕುಸಿದು 13 ಜನ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಮಳೆ ಹೆಚ್ಚಾಗಿರುವುದರಿಂದ ಮುನ್ನಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ.ಇನ್ನು ಫಿರೋಜಾಬಾದ್ನಲ್ಲೂ ಭಯಂಕರ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಜಮೀನುಗಳಿಗೆ ಮಳೆಗೆ ನೀರು ಹರಿದು ಬೆಳೆ ನಾಶವಾಗಿದೆ. ಕಾರುಗಳು ಜಲಸಮಾಧಿಯಾಗಿವೆ. ಇಂದೂ ಕೂಡಾ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.