ತಮಿಳುನಾಡು: ಪಿಎಫ್ಐ ಕಚೇರಿಗಳ ಮೇಲೆ ಎನ್ಐಎ ದಾಳಿ ಬೆನ್ನಲ್ಲೇ ಕೊಯಮತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ. ಆದರೆ, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ.
ಪೆಟ್ರೋಲ್ ಬಾಂಬ್ ಎಸೆಯುವ ಮೊದಲು ಬಿಜೆಪಿ ಕಚೇರಿ ಬಳಿ ಕೆಲವರು ಅನುಮಾನಸ್ಪದವಾಗಿ ಚಲಿಸಿರುವುದು ಕಂಡುಬಂದಿದೆ. ಜೊತೆಗೆ ಹಿಂದೂ ಸಂಘಟನೆಯ ಪದಾಧಿಕಾರಿಯೊಬ್ಬರ ಒಡೆತನದ ಮತ್ತೊಂದು ವಾಣಿಜ್ಯ ಸಂಸ್ಥೆ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಉನ್ನತಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
ಕೊಯಮತ್ತೂರು ಪಕ್ಷದ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆದ್ದಾರೆ. ಆದರೆ ಈ ಘಟನೆಯಿಂದ ನಮ್ಮ ಸಹೋದರ ಸಹೋದರಿಯರನ್ನು ತಡೆಯಲು ಸಾಧ್ಯವಿಲ್ಲ. ಇದು ನಮ್ಮ ಸಮಾಜ ಮತ್ತು ದೇಶಕ್ಕೆ ದ್ರೋಹ ಬಗೆಯುವ ಶಕ್ತಿಗಳ ವಿರುದ್ಧ ಕಠಿಣವಾಗಿ ಹೋರಾಡುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ.
– ಕೆ ಅಣ್ಣಾಮಲೈ, ತಮಿಳುನಾಡು ಬಿಜೆಪಿ ಮುಖ್ಯಸ್ಥ