ನಾನು ಸಸ್ಯಹಾರಿ, ನಾನ್ ವೆಜ್ ತಿನ್ನಲ್ಲ : ಡಿ.ಕೆ ಶಿವಕುಮಾರ್

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹತ್ತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಆಹಾರ ಕ್ರಮ ಮತ್ತು ತಮಗಿಷ್ಟವಾದ ಊಟದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಡಿಕೆಶಿ ಇದೀಗ ಅಪ್ಪಟ ಸಸ್ಯಹಾರಿಯಂತೆ. ಜೈಲಿನಿಂದ ಬಂದ ನಂತರ ನಾನ್ ವೆಜ್ ತ್ಯಜಿಸಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಮಶ್ರೂಮ್ ಮತ್ತು ಕಡೆಲೆಕಾಯಿ ಅಂದರೆ ಡಿಕೆಶಿಗೆ ಪ್ರಾಣ ಎಂದು ಡಿಕೆಶಿ ಪತ್ನಿ ಉಷಾ ತಿಳಿಸಿದ್ದಾರೆ.

ಶಿಕ್ಷಣ ಮತ್ತು ರಾಜಕಾರಣದ ಬಗ್ಗೆಯೂ ಅವರು ಮಾತನಾಡಿದ್ದು, ನಾನು 7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ ಎಂದು ಡಿಕೆಶಿ ಅವರು ಹೇಳಿದ್ದಾರೆ. ಬಳಿಕ ಡಿಕೆಶಿ, ಒಬ್ಬ ಒಳ್ಳೆಯ ಆಡಳಿತಗಾರ ಎಂದು ಸಿಎಂ ಸಿದ್ಧರಾಮಯ್ಯ ಬಣ್ಣಿಸಿದ್ದಾರೆ. ಹೊರಗಡೆ ಅವರು ತುಂಬಾ ಟಫ್ ವ್ಯಕ್ತಿ, ಆದರೆ ಮನೆಯಲ್ಲಿ ಅವರು ತುಂಬಾ ಎಮೋಷನಲ್ ಎಂದು ಡಿಕೆಶಿ ಪತ್ನಿ ಮಾತನಾಡಿದ್ದಾರೆ. ಪುತ್ರಿ, ನನ್ನ ತಂದೆಯೇ ನನ್ನ ಹೀರೋ ಎಂದು ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನನ್ನ ನೋಡಿದ್ದರು. ಯೂ ಆರ್ ಸೆಲೆಕ್ಟೆಟೆಡ್ ಫಾರ್ ವರ್ಲ್ಡ್ ಯೂತ್ ಸ್ಟುಡೆಂಟ್ ಫೆಸ್ಟಿವಲ್ ಅಂದ್ರು. ಬೈ ಬರ್ತ್ ನಾನೊಬ್ಬ ರೈತ, ಆದರೆ ನನ್ನ ಆಸಕ್ತಿ ಇರೋದು ರಾಜಕಾರಣದಲ್ಲಿ ಎಂದು ಡಿಕೆಶಿ ಅವರು ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದಾರೆ. ಈ ಕುರಿತ ಪ್ರೋಮೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಈ ಶನಿವಾರ- ಭಾನುವಾರ ಪ್ರಸಾರವಾದರೆ ಜನಪ್ರಿಯ ಟಾಕ್ ಶೋ ವೀಕೆಂಡ್ ವಿತ್ ರಮೇಶ್ ಮುಕ್ತಾಯವಾಗಲಿದೆ. ಈ ಬಾರಿ ಅತೀ ವೇಗದಲ್ಲಿ ಈ ಕಾರ್ಯಕ್ರಮವನ್ನು ಮುಗಿಸಿದೆ ಜೀ ಕನ್ನಡ ವಾಹಿನಿ. ಮೊದಲ ಸೀಸನ್ ನಿಂದ ಈ ಸೀಸನ್ ವರೆಗೂ ಒಟ್ಟು 100 ಸಾಧಕರು ವೀಕೆಂಡ್ ಕುರ್ಚಿ ಮೇಲೆ ಕೂತು ತಮ್ಮ ಸಾಧನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ವೀಕೆಂಡ್ ಟೆಂಟ್ ನಲ್ಲಿ ಕೂತು ತಮ್ಮ ಬದುಕನ್ನು ರಿವೈಂಡ್ ಮಾಡಿ ನೋಡಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಪಿಸೋಡ್ ಮೂಲಕ  ಈ ಸೀಸನ್ ಮುಗಿಯಲಿದೆ.

ಡಿಕೆಶಿ ಅವರ ಎಪಿಸೋಡ್ ನ ಪ್ರೊಮೋನಲ್ಲೇ ‘ಗ್ರ್ಯಾಂಡ್ ಫಿನಾಲೆ’ ಎಂದು ಹಾಕಲಾಗಿದೆ.  ಸಾಧಕರ ಸೀಟಿನಲ್ಲಿ ಕುಳಿತಿರುವ ಡಿ.ಕೆ. ಶಿವಕುಮಾರ್ ತಮ್ಮ ಬದುಕನ್ನು ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಕೇವಲ ಶಿವಕುಮಾರ್ ಮಾತ್ರವಲ್ಲ, ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು, ರಾಜಕಾರಣಿಗಳು ಹೀಗೆ ಅನೇಕರು ಈ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದು, ಅವರೆಲ್ಲರೂ ಡಿಕೆಶಿ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನಟ ರಮೇಶ್ ಅರವಿಂದ್ ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ತಮ್ಮ ಜೀವನವನ್ನು ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರು ಸಾಧಕರ ಸೀಟ್ ಮೇಲೆ ಕೂರಿಸಿಕೊಂಡು ಅವರ ಕಥೆ ಕೇಳಿದ್ದಾರೆ. ಡಿಕೆಶಿ ಕಥೆಯನ್ನು ಆಪ್ತರಿಂದ ಹೇಳಿಸಿದ್ದಾರೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್ ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಅವರ ಸಾಲಿಗೆ ಡಿ.ಕೆ ಶಿವಕುಮಾರ್ ಸೇರಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ.