ಹಲವು ಕಾರಣಗಳಿಂದ ನಟಿ ಗೆಹನಾ ವಸಿಷ್ಠ್ ಅವರು ಸುದ್ದಿ ಆಗಿದ್ದರು. ಈಗ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. . ಹೌದು, ಗೆಹನಾ ವಸಿಷ್ಠ ಅವರು ಪ್ರಿಯಕರ ಫೈಜನ್ ಅನ್ಸಾರಿ ಜೊತೆ ಮದುವೆ ಆಗಿದ್ದಾರೆ. ಅಲ್ಲದೇ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬ ವರದಿ ಕೂಡ ಪ್ರಕಟ ಆಗಿದೆ. ಮುಸ್ಲಿಂ ಸಂಪ್ರದಾಯದ ರೀತಿಯಲ್ಲೇ ಮದುವೆ ನಡೆದಿದೆ. ನಿಖಾ ಸಮಾರಂಭದ ಫೋಟೋಗಳು ಕೂಡ ವೈರಲ್ ಆಗಿವೆ. ಗೆಹನಾ ವಸಿಷ್ಠ್ ಮತ್ತು ಫೈಜನ್ ಅನ್ಸಾರಿಯ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಫೈಜನ್ ಅನ್ಸಾರಿ ಮತ್ತು ಗೆಹನಾ ವಸಿಷ್ಠ್ ಅವರು ಬಹುಕಾಲದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮದುವೆಯ ಕಾರಣಕ್ಕಾಗಿ ಅವರು ಮತಾಂತರ ಆಗಿಲ್ಲ. ಇದು ಅವರ ಸ್ವಂತ ನಿರ್ಧಾರ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್ ಆಗಿ ಫೈಜನ್ ಅನ್ಸಾರಿ ಗುರುತಿಸಿಕೊಂಡಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದಾರೆ. ಇಬ್ಬರ ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಗೆಹನಾ ವಸಿಷ್ಠ್ ಅವರ ಮೂಲ ಹೆಸರು ವಂದನಾ ತಿವಾರಿ. ಮೂಲತಃ ಅವರು ಚತ್ತೀಸ್ಗಡದವರು. ಮಾಡೆಲ್ ಆಗಿ ಜನಪ್ರಿಯತೆ ಪಡೆದ ಅವರು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ಹಾಗೂ ಐಟಂ ಡ್ಯಾನ್ಸರ್ ಆಗಿಯೂ ಕಾಣಿಸಿಕೊಂಡು ಖ್ಯಾತಿ ಪಡೆದಿದ್ದಾರೆ. ಹಿಂದಿ ಕಿರುತೆರೆಯಲ್ಲೂ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೇ ವೆಬ್ ಸಿರೀಸ್ಗಳಲ್ಲಿ ಕೂಡ ಗೆಹನಾ ವಸಿಷ್ಠ್ ಅಭಿನಯಿಸಿದ್ದಾರೆ. ಅವರು ನಟಿಸಿದ ‘ಗಂದಿ ಬಾತ್ 3’ ವೆಬ್ ಸರಣಿ ಸಾಕಷ್ಟು ಸದ್ದು ಮಾಡಿತು. ಕಿರುತೆರೆಯಲ್ಲಿ ನಿರೂಪಕಿ ಆಗಿಯೂ ಅವರು ಗಮನ ಸೆಳೆದಿದ್ದಾರೆ.