ಭಟ್ಕಳ:
ತಾಲೂಕಿನ ಯಲ್ವಡಿಕವೂರ ಗ್ರಾಮದ ನಾರಾಯಣ ನಾಯ್ಕ ಅವರ ಮನೆಯ ಆವರಣದಲ್ಲಿರುವ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ರಕ್ಷಕರ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದೆ. ಭಾನುವಾರ ನಡೆದ ಈ ಕಾರ್ಯಾಚರಣೆ ಸ್ಥಳೀಯರ ಗಮನ ಸೆಳೆದಿದ್ದು, ನೂರಾರು ಜನರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಯನ್ನು ವೀಕ್ಷಿಸಿದರು.

ಭಾನುವಾರ ಬೆಳಿಗ್ಗೆ ನಾರಾಯಣ ನಾಯ್ಕ ಅವರು ತಮ್ಮ ಮನೆಯ ಆವರಣದಲ್ಲಿ ಇದ್ದಾಗ ಬಾವಿಯಿಂದ ನಿರಂತರವಾಗಿ ಕೋಗುವ ಶಬ್ದ ಕೇಳಿಬಂದಿತು. ಅನುಮಾನಗೊಂಡು ಬಾವಿಯೊಳಗೆ ನೋಡಿದಾಗ ಸುಮಾರು ಎರಡರಿಂದ ಮೂರು ವರ್ಷದ ಗಂಡು ಚಿರತೆಯೊಂದು ಬಾವಿಗೆ ಬಿದ್ದು ಮೇಲಕ್ಕೆ ಬರಲಾಗದೆ ಒದ್ದಾಡುತ್ತಿರುವುದು ಕಂಡುಬಂತು. ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗೋಕರ್ಣ ತದಡಿಯ ವನ್ಯಜೀವಿ ರಕ್ಷಕರಾದ ಅಶೋಕ ನಾಯ್ಕ, ಮಹೇಶ ನಾಯ್ಕ ಹಾಗೂ ನಾಗರಾಜ ಹರೀಕಾಂತ ಅವರ ತಂಡವೂ ಸ್ಥಳಕ್ಕೆ ಆಗಮಿಸಿ ಅರಣ್ಯ ಸಿಬ್ಬಂದಿಯೊಂದಿಗೆ ಸಮನ್ವಯದಿಂದ ಕಾರ್ಯಾಚರಣೆ ನಡೆಸಿತು. ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚಿರತೆಯನ್ನು ಬಾವಿಯಿಂದ ಮೇಲಕ್ಕೆತ್ತಿ ಬೋನಿನಲ್ಲಿ ಇರಿಸಲಾಯಿತು.

ರಕ್ಷಣಾ ಕಾರ್ಯಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅರಣ್ಯ ಸಿಬ್ಬಂದಿ ಸ್ಥಳೀಯರನ್ನು ಸುರಕ್ಷಿತ ಅಂತರದಲ್ಲಿ ನಿಲ್ಲಿಸಿದರು. ಆದರೂ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಚಿರತೆಯನ್ನು ನೋಡಲು ಮುಗಿಬಿದ್ದರು. ರಕ್ಷಿಸಲಾದ ಚಿರತೆ ಆರೋಗ್ಯವಾಗಿದ್ದು, ಪ್ರಾಥಮಿಕ ಪರಿಶೀಲನೆಯ ಬಳಿಕ ಅದನ್ನು ಸುರಕ್ಷಿತವಾಗಿ ದೂರದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆರ್‌ಎಫ್‌ಒ ವಿಶ್ವನಾಥ ನಾಯ್ಕ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಮಾರುತಿ ಸೋರಗಾಂವಿ, ಫಾರೆಸ್ಟರ್‌ಗಳಾದ ಮಹೇಶ ಅಜ್ಜರ, ನಾಗರಾಜ ನಾಯ್ಕ, ಸಂದೀಪ್ ಭಂಡಾರಿ ಹಾಗೂ ಸಿಬ್ಬಂದಿಗಳಾದ ರಾಮಕೃಷ್ಣ ನಾಯ್ಕ, ಮಾದೇವ ನಾಯ್ಕ, ಕುಪ್ಪಯ್ಯ ಗೊಂಡ, ಮಹೇಶ ನಾಯ್ಕ, ಈಶ್ವರ ನಾಯ್ಕ, ವರುಣ್ ಚೌಹಾಣ್ ಸೇರಿದಂತೆ ಹಲವು ಸಿಬ್ಬಂದಿ ಮತ್ತು ವನ್ಯಜೀವಿ ರಕ್ಷಕರು ಭಾಗವಹಿಸಿದ್ದರು.
