ಬಂಗಾರಮಕ್ಕಿ ಜಾತ್ರೆ ಅದ್ದೂರಿ: ಭಕ್ತಿ, ಸಂಪ್ರದಾಯ, ಸಂಭ್ರಮದ ಸಂಗಮ

ಹೊನ್ನಾವರ:
ಗೇರುಸೊಪ್ಪದ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಹನುಮ ಜಯಂತಿ ಅಂಗವಾಗಿ ಶ್ರೀ ವೀರಾಂಜನೇಯ ದೇವರ ಮಹಾಬ್ರಹ್ಮರಥೋತ್ಸವ ವಿಜ್ರಂಭಣೆಯಿಂದ ಜರುಗಿತು.

ಸಾಂಪ್ರದಾಯಿಕ ಪೂಜಾ ವಿಧಾನಗಳಿಂದ ದೇವಸ್ಥಾನದ ಆವರಣದಲ್ಲಿ ಪೂಜೆ, ಪುನಸ್ಕಾರ ಕಾರ್ಯಕ್ರಮ ನಡೆಯಿತು. ಶ್ರೀ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿ ಪೂಜಿಸಲಾಯಿತು. ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಪೂಜ್ಯ ಶ್ರೀ ಮಾರುತಿ ಗುರೂಜಿ ಸಾನಿಧ್ಯದಲ್ಲಿ ಉತ್ಸವ ನಡೆಯಿತು. ಭಕ್ತರು ಶ್ರೀ ದೇವರಿಗೆ ಹಣ್ಣು-ಕಾಯಿ ಸೇವೆ, ಅಭಿಷೇಕ, ಅರ್ಚನೆ ಇನ್ನಿತರ ಸೇವೆಗಳನ್ನು ಸಲ್ಲಿಸಿದರು. ರಥ ಕಾಣಿಕೆ ಸಮರ್ಪಿಸಿ ಭಕ್ತಿ ಭಾವದಿಂದ ಬೇಡಿಕೊಂಡರು. ನಂತರ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ಭಕ್ತಗಣ ಜೈಶ್ರೀರಾಮ, ಜೈ ಹನುಮಾನ್ ಜಯಘೋಷ ಮಂತ್ರಗಳೊಂದಿಗೆ ರಥ ಎಳೆದು ಸಂಭ್ರಮಿಸಿದರು‌. ರಥಕ್ಕೆ ಬಾಳೆಹಣ್ಣು ಎಸೆದು ರಥಾರೂಡನಾದ ಶ್ರೀ ವಿಶ್ವ ವೀರಾಂಜನೇಯನ ಕಣ್ತುಂಬಿಕೊಂಡು ಪುನೀತರಾದರು. ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಸಿಹಿಖಾದ್ಯ ಅಂಗಡಿಗಳು, ಆಟಿಕೆ ಅಂಗಡಿಗಳು, ಅಮ್ಯೂಸ್ಮೆಂಟ್‌ ಪಾರ್ಕಗಳಿದ್ದವು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಇನ್ನು, ಜಾತ್ರಾ ಮಹೋತ್ಸವ ಹಾಗೂ ಶ್ರೀ ಕ್ಷೇತ್ರದಲ್ಲಿ ರಾಮನವಮಿಯಿಂದ ಹನುಮ ಜಯಂತಿವರೆಗೆ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ಮಾಧ್ಯಮದವರೊಂದಿಗೆ ಮಾತನಾಡಿದರು. ಭಕ್ತಾಧಿಗಳ ಸಹಕಾರದಿಂದ ಮಲೆನಾಡು ಉತ್ಸವ, ಜಾತ್ರಾಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಬಹುದಿನದ ಅಪೇಕ್ಷೆಯಾದ ಸೈನ್ಸ್ ಮತ್ತು ರಿಸರ್ಚ್ ಸೆಂಟರ್ ಮಾಡಬೇಕೆನ್ನುವ ಸಂಕಲ್ಪ ಇತ್ತು. ಇಸ್ರೋದ ಮಾಜಿ ಅಧ್ಯಕ್ಷ ಎಸ್. ಕಿರಣಕುಮಾರ ಮಲೆನಾಡು ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಭರವಸೆ ನೀಡಿದ್ದಾರೆ. ಈ ಮಹತ್ಕಾರ್ಯಕ್ಕೆ ಮಲೆನಾಡು ಉತ್ಸವ ಸಾಕ್ಷಿಯಾಗಿದೆ ಎಂದರು. ಶರಾವತಿ ಪಂಪ್ಡ್‌ಸ್ಟೋರೇಜ್ ಯೋಜನೆ ಎಲ್ಲಿಯವರೆಗೆ ಸಂಪೂರ್ಣವಾಗಿ ಬಂದ್ ಆಗುವುದಿಲ್ಲವೋ, ಅಲ್ಲಿಯವರೆಗೆ ಯೋಜನೆಯ ವಿರುದ್ದದ ಹೋರಾಟ ನಿರಂತರವಾಗಲಿದೆ. ಹೋರಾಟ ಇನ್ನಷ್ಟು ಬಲಿಷ್ಠಗೊಳ್ಳಲು ಜನರ ಬೆಂಬಲ ಹೆಚ್ಚಿನದಾಗಿದೆ. ಗ್ರಾಮಗ್ರಾಮಕ್ಕೆ ತೆರಳಿ ಇನ್ನಷ್ಟು ಜನರ ತಲುಪಬೇಕಿದೆ. ಎಲ್ಲರಿಗು ಯೋಜನೆ ವಿರುದ್ದದ ಹೋರಾಟದ ಕಿಚ್ಚಿದೆ. ಪರಿಸರ ತಜ್ಞರಾದ ರಾಜೇಂದ್ರಸಿಂಗ್ ಸೇರಿದಂತೆ ಕ್ಷೇತ್ರಕ್ಕೆ ಆಗಮಿಸಿದ ಅನೇಕ ವಿಜ್ಞಾನಿಗಳು, ತಜ್ಞರು, ಸಾಮಾಜಿಕ ಕಳಕಳಿಯುಳ್ಳವರು ಹೋರಾಟಕ್ಕೆ ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಕಾನೂನಿನಲ್ಲಿ ಒಂದು ಹಂತದ ತಡೆಬಂದು ಯಶಸ್ಸು ಸಿಕ್ಕಿದೆ. ಆದರೆ ಇದು ತಾತ್ಕಾಲಿಕವಾಗಿದೆ. ಯೋಜನೆ ಸಂಪೂರ್ಣ ನಿಲ್ಲಲು ನಮ್ಮ ಧ್ವನಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡುತ್ತಿದ್ದೇವೆ.ಆಡಳಿತಾರೂಢ ಪ್ರತಿನಿಧಿಗಳು ಈ ಧ್ವನಿಗೆ ಸ್ಪಂದಿಸಿ ಶಾಸ್ವತವಾಗಿ ಈ ಯೋಜನೆ ನಿಲ್ಲಿಸಲು ಪ್ರಯತ್ನಿಸಬೇಕು ಎಂದರು.

ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ರಾಮನವಮಿಯಿಂದ ಹನುಮ ಜಯಂತಿ ವರೆಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಇನ್ನಿತರ ಜನುಪಯೋಗಿ ಕಾರ್ಯಕ್ರಮಗಳು ನಡೆದಿದ್ದು, ಆಧ್ಯಾತ್ಮಿಕವಾಗಿ ಭಕ್ತರ ಶೃದ್ದಾಕೇಂದ್ರವಾಗುವ ಜತೆಗೆ ಮಲೆನಾಡು ಉತ್ಸವ ಮೂಲಕ ಸಾಂಸ್ಕೃತಿಕವಾಗಿಯು ವಿಶ್ವವೀರಾಂಜನೇಯನ ಕ್ಷೇತ್ರ ವಿಶ್ವ ವಿಖ್ಯಾತಿಯಾಗುತ್ತಿದೆ ಎನ್ನಬಹುದು