‘ಕರ್ನಾಟಕದ ತಿರುಪತಿ’ ಮಂಜುಗುಣಿಯಲ್ಲಿ ಮಹಾರಥೋತ್ಸವ ಸಂಭ್ರಮ

ಶಿರಸಿ:

ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದ ಶಿರಸಿಯ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ‘ಪರಾಭವ’ ನಾಮ ಸಂವತ್ಸರದ ಅಂಗವಾಗಿ ನಡೆಯುವ ವಾರ್ಷಿಕ ಮಹಾರಥೋತ್ಸವವು ಗುರುವಾರ ಅತ್ಯಂತ ಭಕ್ತಿಭಾವಪೂರ್ಣವಾಗಿ ಹಾಗೂ ಅದ್ದೂರಿಯಾಗಿ ನೆರವೇರಿತು.

ವೇದಮೂರ್ತಿ ಶ್ರೀನಿವಾಸ ಭಟ್ಟ ಅವರ ನೇತೃತ್ವದಲ್ಲಿ ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ದೊರೆಯಿತು. ಪೂರ್ವನಿಗದಿತ ವೇದ ವಿಧಿವಿಧಾನಗಳೊಂದಿಗೆ ರಥಾರೋಹಣ ನೆರವೇರಿದ ಬಳಿಕ, ಭಕ್ತರ ಘೋಷಣೆಗಳ ನಡುವೆ ರಥ ಎಳೆಯುವ ಪವಿತ್ರ ಕ್ಷಣ ಆರಂಭವಾಯಿತು.

ಅಪಾರ ಭಕ್ತಸಾಗರದ ನಡುವೆ ನಡೆದ ಈ ಮಹೋತ್ಸವದಲ್ಲಿ, ದೇವರ ರಥವು ಬೆಳಿಗ್ಗೆ ಸುಮಾರು 9.15ರ ವೇಳೆಗೆ ಮೂಲಸ್ಥಾನಕ್ಕೆ ಮರಳಿ, ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಆನಂದದ ಭಾವವನ್ನು ಮೂಡಿಸಿತು.

ರಥೋತ್ಸವದ ಸಂದರ್ಭದಲ್ಲಿ ಭಕ್ತರು ತಮ್ಮ ಹರಕೆಗಳನ್ನು ಭಕ್ತಿಭಾವದಿಂದ ನೆರವೇರಿಸಿದರು. ಗಾಲಿ ಅಡಿಗೆ, ಮಕ್ಕಳ ಉರುಳು ಸೇವೆ, ಕಡಲೆ-ಬಾಳೆಹಣ್ಣು ಅರ್ಪಣೆ, ಹಣ್ಣು-ಕಾಯಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನಡೆದವು. ರಥಕಾಣಿಕೆ ಸಲ್ಲಿಸಿ ದೇವರ ಆಶೀರ್ವಾದ ಪಡೆಯಲು ಭಕ್ತರು ಸಾಲುಗಟ್ಟಿ ನಿಂತರು. ರಾತ್ರಿವರೆಗೂ ರಥದ ಮೇಲೆ ದೇವರ ದರ್ಶನಕ್ಕಾಗಿ ಭಕ್ತರ ದಂಡು ಹರಿದುಬಂದಿದ್ದು, ಉತ್ಸವವು ಉತ್ಸಾಹಭರಿತ ವಾತಾವರಣದಲ್ಲಿ ಸಾಗಿತು.

ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಉತ್ಸವವು ಅತ್ಯಂತ ಸುವ್ಯವಸ್ಥಿತವಾಗಿ, ಯಶಸ್ವಿಯಾಗಿ ಜರುಗಿತು.